ಬೆಂಗಳೂರು/ದೆಹಲಿ: ಲಾಕ್ಡೌನ್ ಹೇರಿಕೆಯಿಂದ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಚಿವರು, ಈ ದಿಸೆಯಲ್ಲಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರೊಂದಿಗೆ ತಾವು ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದಿದ್ದಾರೆ.
ದೆಹಲಿಯ ಹೊರತಾಗಿ ಹರಿಯಾಣ, ಪಂಜಾಬ್ ಮತ್ತಿತರ ಸಮೀಪದ ಸ್ಥಳಗಳಿಂದಲೂ ರಾಜ್ಯಕ್ಕೆ ವಾಪಸ್ ಆಗಲು ಅಲ್ಲಿರುವ ಕನ್ನಡಿಗರು ಕಾತರರಾಗಿದ್ದಾರೆ. ಆ ರಾಜ್ಯಗಳ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ಅವರನ್ನೂ ಇದೇ ರೈಲಿನಲ್ಲಿ ಕರ್ನಾಟಕಕ್ಕೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡುವಂತೆ ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
![Special train for Kannadigas](https://etvbharatimages.akamaized.net/etvbharat/prod-images/kn-bng-10-dvs-press-statement-script-7208080_07052020193027_0705f_1588860027_623.jpg)
ಅರಬ್ ದೇಶಗಳಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ಎರಡು ವಿಮಾನಗಳ ವ್ಯವಸ್ಥೆಯಾಗಿದೆ. ಇದೇ 12 ರಂದು ಯುಎಇ ಯಿಂದ ಮಂಗಳೂರಿಗೆ ವಿಮಾನ ಸಂಚರಿಸುವುದನ್ನು ವಿದೇಶಾಂಗ ಸಚಿವರು ತಮಗೆ ಖಚಿತಪಡಿಸಿದ್ದಾರೆ. ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದ್ದು ಅದರ ವೇಳಾಪಟ್ಟಿಯನ್ನೂ ಪ್ರಕಟವಾಗಬೇಕಿದೆ ಎಂದರು.
ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಕರ್ನಾಟಕಕ್ಕೆ ಮರಳಲಿಚ್ಛಿಸಿದ ಅನೇಕ ದೆಹಲಿವಾಸಿ ಕನ್ನಡಿಗರು ಹಾಗೂ ಯಾತ್ರಾರ್ಥಿಗಳಿಗೂ ಅಗತ್ಯ ಪರವಾನಗಿ ಕೊಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.