ಬೆಂಗಳೂರು: ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಈಗಾಗಲೇ ಅಗತ್ಯ ಸೇವೆಗಾಗಿ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳು ಕಾರ್ಯಾಚರಣೆಗಿಳಿದಿವೆ. ಆರೋಗ್ಯ ಸೇವೆಯ ಸಹಾಯಕ್ಕೆ ಅಗತ್ಯ ಬಿದ್ದರೆ ಇನ್ನಷ್ಟು ಸಾರಿಗೆ ಸೌಲಭ್ಯ ಒದಗಿಸಲು ನಿಗಮಗಳು ಸಿದ್ಧ ಅಂತ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರುನಲ್ಲಿ ಆರೋಗ್ಯ ಮತ್ತು ತುರ್ತು ಸೇವೆಗಳಿಗಾಗಿ ಪ್ರತಿನಿತ್ಯ 156 ಬಿಎಂಟಿಸಿ ಬಸ್ಗಳನ್ನು ಒದಗಿಸಲಾಗಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ಇವರ ಓಡಾಟಕ್ಕೆ ಸಾರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ. ಹಾಗೇ ಕೆಎಸ್ಆರ್ಟಿಸಿಯಿಂದಲೂ ಸುಮಾರು 50ಕ್ಕೂ ಬಸ್ಗಳು ಸಂಚರಿಸುತ್ತಿವೆ. ವಾಯವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮಗಳಿಂದಲೂ ತುರ್ತು ಸೇವೆಗೆ ಸಿದ್ಧವಿದೆ ಅಂತ ತಿಳಿಸಿದ್ದಾರೆ.
ಮೊದಲ ಅಲೆಯಲ್ಲಿ ನಿರ್ಮಾಣವಾಗಿದ್ದ ಮೊಬೈಲ್ ಕ್ಲಿನಿಕ್ ಎರಡನೇ ಅಲೆಯಲ್ಲೂ ಬಳಕೆ
ಕಳೆದ ವರ್ಷ ಕೋವಿಡ್ ಮೊದಲ ಅಲೆಯ ನಿಯಂತ್ರಣದ ಅಂಗವಾಗಿ ಸಾರಿಗೆ ನಿಗಮಗಳ ಬಸ್ಗಳನ್ನೇ ಮೊಬೈಲ್ ಕ್ಲಿನಿಕ್ಗಳನ್ನಾಗಿ ಮತ್ತು ಕೋವಿಡ್ ಟೆಸ್ಟಿಂಗ್ ವಾಹನಗಳನ್ನಾಗಿ ಮಾರ್ಪಡಿಸಲಾಗಿತ್ತು. ಸುಮಾರು 20 ಮೊಬೈಲ್ ಬಸ್ಗಳನ್ನು ಸಹ ಎರಡನೇ ಅಲೆಯ ಬಳಕೆಗೂ ಮುಂದುವರೆಸಲಾಗುವುದು. ಈ ಬಸ್ಗಳ ಸೇವೆ ಇತರೆ ಪ್ರಯಾಣಿಕರಿಗೆ ಇರುವುದಿಲ್ಲ. ಸಾರ್ವಜನಿಕರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಸಹಕಾರ ನೀಡಬೇಕೆಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.