ಬೆಂಗಳೂರು: ''ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು'' ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಸೋಮವಾರ ಭರವಸೆ ನೀಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಎರಡು ತಿಂಗಳಲ್ಲಿ 200 ಪಶು ಪರೀಕ್ಷಕರನ್ನು ಹಾಗೂ ಡಿಸೆಂಬರ್ ಅಂತ್ಯದೊಳಗೆ 400 ಪಶು ವೈದ್ಯರನ್ನು ನೇಮಕ ಮಾಡಲಾಗುವುದು'' ಎಂದು ತಿಳಿಸಿದರು. ''ಪಶು ಚಿಕಿತ್ಸಾಲಯಗಳಲ್ಲಿ ಹೆಚ್ಚುವರಿಯಾಗಿರುವ ಪಶುವೈದ್ಯರನ್ನು ಅಗತ್ಯವಿರುವ ಕಡೆ ವರ್ಗಾವಣೆ ಮಾಡಲಾಗುವುದು. ಸಿಬ್ಬಂದಿ ನೇಮಕ ಸಂಬಂಧ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ದೊರೆತ ಕೊಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದರು.
''ಐದು ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರು ಇರಬೇಕೆಂಬ ನಿಯಮವಿದೆ. ಜಾನುವಾರುಗಳ ಸಂಖ್ಯಾನುಸಾರ ಸಿಬ್ಬಂದಿ ನೇಮಕಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು. ಈ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ''ಮೂಕ ಪ್ರಾಣಿಗಳ ಜೀವ ರಕ್ಷಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳ ಮಾದರಿಯಲ್ಲಿ ಖಾಸಗಿ ಪಶುವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು'' ಎಂದು ಸಲಹೆ ನೀಡಿದರು.
ಪಶುಚಿಕಿತ್ಸಾ ಕೇಂದ್ರ ಸ್ಥಾಪನೆ: ರಾಜ್ಯದಲ್ಲಿ ಹೊಸದಾಗಿ 100 ಪಶುಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ 20 ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. 30 ಪಶು ಚಿಕಿತ್ಸಾಲಯಗಳನ್ನು ತೆರೆಯುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ಅವರು, ಜೆಡಿಎಸ್ ಸದಸ್ಯ ವೆಂಕಟಶಿವಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದರು.
ಹೊಸ ತಾಲೂಕು ರಚನೆ ಇಲ್ಲ: ಸದ್ಯಕ್ಕೆ ಹೊಸ ತಾಲೂಕುಗಳ ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹೊಸ ಮಾನದಂಡಗಳನ್ನು ರೂಪಿಸಿದ ನಂತರವೇ ನೂತನ ತಾಲೂಕುಗಳನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಪ್ರಶ್ನೋತರ ವೇಳೆ ಆಡಳಿತ ಪಕ್ಷದ ಸದಸ್ಯ ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದರು.
''ಈಗಾಗಲೇ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ 63 ತಾಲೂಕುಗಳಲ್ಲಿ ಕಟ್ಟಡಗಳು ಸೇರಿ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಈ ನಿಟ್ಟಿಲ್ಲಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಶಾಸಕರು, ಸಚಿವರು ಹಾಗೂ ಸಂಘ ಸಂಸ್ಥೆಗಳಿಂದ ನೂತನ ತಾಲೂಕುಗಳ ರಚನೆ ಮಾಡುವಂತೆ ಮನವಿಗಳು ಬರುತ್ತಿರುವೆ. ಆದರೆ, ಈಗಾಗಲೇ ರಚನೆ ಮಾಡಿರುವ ಹೊಸ ತಾಲೂಕುಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸದೇ ಹೊಸ ತಾಲೂಕುಗಳನ್ನು ಮಾಡುವುದು ಸರಿಯಲ್ಲ'' ಎಂದು ಹೇಳಿದರು.
ಎಂ.ಬಿ. ಪ್ರಕಾಶ್ ನೇತೃತ್ವದ ಸಮಿತಿ ಶಿಫಾರಸ್ಸಿನಂತೆ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತನೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ, ಮಾನದಂಡಗಳನ್ನು ರೂಪಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ; ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ