ಬೆಂಗಳೂರು: ರಾಜ್ಯ ವಿಧಾನಸಭೆಯ 15 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಪರಮಾಧಿಕಾರ ನೀಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜೊತೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸ್ಥಾನವನ್ನು ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭ ಷರತ್ತಿನ ಮೇಲೆ ಈ ಜವಾಬ್ದಾರಿಯನ್ನು ನೀಡಲಾಗಿದೆ.
ಭೇಟಿ ಸಂದರ್ಭ ಸೋನಿಯಾಗಾಂಧಿ ಸಿದ್ದರಾಮಯ್ಯ ಅವರ ಬಳಿ ಟಿಕೆಟ್ ಹಂಚಿಕೆ ಪರಮಾಧಿಕಾರ ತಮ್ಮದು. ಇದರಲ್ಲಿ ಬೇರೆ ಯಾರೂ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡುವುದಿಲ್ಲ. ನೀವು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ. ಕಾಂಗ್ರೆಸ್ ಪಾಲಿಗೆ ಉಪಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದ್ದು 15ರ ಪೈಕಿ ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು. ಈ ಕಾರ್ಯದಲ್ಲಿ ಯಶಸ್ವಿಯಾಗುವ ಮೂಲಕ ಪಕ್ಷದ ಹೈಕಮಾಂಡ್ ನಿಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ.
ದಿನೇಶ್ ಸಮಸ್ಯೆ ಇಲ್ಲ:
ಅಭ್ಯರ್ಥಿಗೆ ಬಿ ಫಾರಂ ನೀಡುವ ಜವಾಬ್ದಾರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರದ್ದಾಗಿದೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆ ದಿನೇಶ್ ಅವರಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ತಕರಾರು ಎದುರಾಗುವುದಿಲ್ಲ. ಹೀಗಾಗಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮುಂದಿನ ಪರಮಾಧಿಕಾರಕ್ಕೆ ಸಂಪೂರ್ಣ ಬೆಲೆ ಸಿಗಲಿದೆ. ಇದರಿಂದ ಸಿದ್ದರಾಮಯ್ಯ ಬಲ ಹೈಕಮಾಂಡ್ ಭೇಟಿ ಬಳಿಕ ಇನ್ನಷ್ಟು ಹೆಚ್ಚಾಗಿದೆ. ಅದೃಷ್ಟವಶಾತ್ ನಿರೀಕ್ಷಿತ ಸ್ಥಾನ ಲಭಿಸಿದರೆ ಅವರು ರಾಜ್ಯ ಕಾಂಗ್ರೆಸ್ ನಲ್ಲಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದ್ದಾರೆ.
ಪ್ರಸ್ತುತ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಶಾಸಕರ 12 ಕ್ಷೇತ್ರಗಳಿವೆ. ಕಾಂಗ್ರೆಸ್ ಶಾಸಕರ ರಾಜೀನಾಮೆ ನೀಡಿರುವ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಇದೀಗ ಎದುರಾಗಿರುವ ಉಪಚುನಾವಣೆ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟಿಸುವಂತೆ ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದ್ದು, ಇಂದಿನ ದಿನಗಳಲ್ಲಿ ಇವರು ಹೇಳಿದ ವ್ಯಕ್ತಿಗಳಿಗೆ ಅಧಿಕಾರಗಳು ಸಿಗುತ್ತ ಹೋಗಲಿವೆ.
ವಲಸೆ ಕಾಂಗ್ರೆಸ್ ಪ್ರಾಬಲ್ಯ:
ಸಿದ್ದರಾಮಯ್ಯಗೆ ಅಧಿಕಾರ ಸಿಗುತ್ತಿದ್ದಂತೆ ರಾಜ್ಯದಲ್ಲಿ ವಲಸೆ ಕಾಂಗ್ರೆಸಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಮೂಲ ಕಾಂಗ್ರೆಸಿಗರಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್ ಎಂಬಿ ಪಾಟೀಲ್ ಸೇರಿದಂತೆ ಬಹುತೇಕ ನಾಯಕರು ಸಿದ್ದರಾಮಯ್ಯ ನಾಯಕತ್ವವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಲಸೆ ಕಾಂಗ್ರೆಸಿಗರ ಮೇಲಾಟ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.