ಬೆಂಗಳೂರು: ಸೋನಿಯಾ ಗಾಂಧಿ ಅವರ ಇವತ್ತಿನ ಇಡಿ ತನಿಖೆ ಮುಕ್ತಾಯವಾದ ಹಿನ್ನೆಲೆ ಕಾಂಗ್ರೆಸ್ ಪಕ್ಷ ತನ್ನ ಮೌನ ಸತ್ಯಾಗ್ರಹವನ್ನು ಮುಗಿಸಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿನ್ನೆ ಬೆಳಗ್ಗೆ ಆರಂಭವಾಗಿದ್ದ ಮೌನ ಸತ್ಯಾಗ್ರಹವನ್ನು ರಾಜ್ಯ ಕಾಂಗ್ರೆಸ್ ನಾಯಕರು ಬುಧವಾರ ಮಧ್ಯಾಹ್ನ ಮುಕ್ತಾಯಗೊಳಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಚಾರಣೆಯನ್ನು ಮೂರನೇ ದಿನಕ್ಕೆ ಮುಕ್ತಾಯಗೊಳಿಸಿದೆ. ಸೋನಿಯಾ ವಿಚಾರಣೆ ನಡೆಯುವ ವೇಳೆ ಮೌನ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ವಿಚಾರಣೆ ಮುಕ್ತಾಯವಾದ ಹಿನ್ನೆಲೆ ಹೋರಾಟವನ್ನು ನಿಲ್ಲಿಸಿದ್ದಾರೆ. ಇಂದು ಬೆಳಗ್ಗೆ ಆರಂಭವಾದ ಹೋರಾಟಕ್ಕೆ ಮಧ್ಯಾಹ್ನ ಬಂದು ಸೇರಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಲ ಹೊತ್ತು ಮೌನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನಂತರ ಸೋನಿಯಾ ವಿಚಾರಣೆ ಮುಕ್ತಾಯವಾಗಿದೆ. ಹಾಗಾಗಿ ನಮ್ಮ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮೋತ್ಸವಕ್ಕೆ ಟಾಂಗ್ ಕೊಟ್ಟ ಡಿಕೆಶಿ: ಪ್ರತಿಭಟನೆ ಮುಕ್ತಾಯಗೊಳಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇವತ್ತಿಗೆ ಮೌನ ಪ್ರತಿಭಟನೆ ನಿಲ್ಲಿಸುತ್ತಿದ್ದೇವೆ. ಆಗಸ್ಟ್ 15 ರಂದು ದೊಡ್ಡ ಜವಾಬ್ದಾರಿ ಇದೆ. ಸಂಘ ಸಂಸ್ಥೆ, ವಿದ್ಯಾರ್ಥಿ, ಕಾರ್ಯಕರ್ತರ ರಿಜಿಸ್ಟರ್ ಮಾಡಿಸಬೇಕು. 3ನೇ ತಾರೀಖು ಖಾಸಗಿ ಕಾರ್ಯಕ್ರಮ ಇದೆ. ಅದು ಅಭಿಮಾನಿಗಳ ಕಾರ್ಯಕ್ರಮ. 15 ನೇ ತಾರೀಖು ನಡೆಯೋದು ರಾಷ್ಟ್ರ ಕಾರ್ಯಕ್ರಮ ಅಂತ ಮತ್ತೊಮ್ಮೆ ಸಿದ್ದರಾಮೋತ್ಸವಕ್ಕೆ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟರು.
ಗೃಹ ಸಚಿವರ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ: ಇಷ್ಟು ದಿನ ಪಕ್ಷದ ಕಾರ್ಯಕ್ರಮವಾಗಿ ಮಾಡ್ತೀವಿ ಎನ್ನುತ್ತಿದ್ದ ಡಿಕೆಶಿ ಅವರು ಸಿದ್ದರಾಮಯ್ಯ ಬೆಂಬಲಿಗರು, ಜಮೀರ್ ನಡೆಯಿಂದ ಬೇಸತ್ತು ಇಂತ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಹಿಜಾಬ್ ಹಿಂದಿನ ಶಕ್ತಿಗಳೇ ಇದರ ಹಿಂದೆ ಇವೆ ಎಂಬ ಗೃಹ ಸಚಿವರ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿ, ಒಬ್ಬ ಹೋಮ್ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ. ಕಳೆದ 15 ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಯಾರದ್ದೊ ಕಡೆ ತೋರಿಸಿ ಸುಮ್ಮನೆ ಅವಲಕ್ಷಣ ಎನ್ನಿಸಿಕೊಳ್ಳಬೇಡಿ. ಡಿಜಿಪಿ ಅಥವಾ ಎಸ್ಪಿ ಹೇಳಬೇಕು, ಯಾರು ಇದರಲ್ಲಿ ಭಾಗಿಯಾಗಿದ್ದಾರೆಂದು.
ಇದನ್ನೂ ಓದಿ: ಹಿರಿಯ 'ಕೈ' ನಾಯಕರ ಅನುಪಸ್ಥಿತಿಯಲ್ಲಿ ಮೌನ ಸತ್ಯಾಗ್ರಹ: ಕಾರ್ಯಕರ್ತರ ಸಂಖ್ಯೆಯೂ ಇಳಿಕೆ
ಇಂತಹ ಕೊಲೆಗಳು ರಾಜಕೀಯವಾಗಿ ಆಯಿತಾ, ಖಾಸಗೀಯಾಗಿ ಆಯಿತಾ, ಬೇರೆ ಉದ್ದೇಶದಿಂದ ಆಯಿತಾ ಅನ್ನೋದನ್ನು ಪೊಲೀಸ್ ಅಧಿಕಾರಿಗಳು ಸರ್ಟಿಫೈ ಮಾಡಬೇಕು. ತನಿಖೆ ಮಾಡಿ. ತಪ್ಪಿತಸ್ಥರು ಯಾರೇ ಆದರೂ ಕಾನೂನು ಕ್ರಮ ಆಗಬೇಕು. ಕಾನೂನು ಸುವ್ಯವಸ್ಥೆ, ಹೋಮ್ ಮಿನಿಸ್ಟರ್, ಸರ್ಕಾರ ಫೇಲ್ ಆಗಿದೆ. ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆಯವರ ಬಾಯಿಗೆ ಒರಿಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು. ಸತ್ಯಾಂಶವನ್ನು ಹೊರಗೆ ಬರಲಿ. ರಾಜಕೀಯಕ್ಕೆ ಮಾಡಿದ್ದಾರೋ, ಬೇರೆ ವೈಯಕ್ತಿಕ ವಿಚಾರಕ್ಕೆ ಮಾಡಿದ್ದಾರೋ. ಅದೆಲ್ಲವೋ ಹೊರಗೆ ಬರಬೇಕು. ಜನರಿಗೆ ಗೊತ್ತಾಗಬೇಕು. ಯಾವ ತನಿಖೆ ಬೇಕಾದರೂ ಮಾಡಲಿ. ಒಟ್ಟಾರೆ ಪೊಲೀಸರು ಫೇಲ್ ಆಗಿದ್ದಾರೆ. ಕಾನೂನು ವ್ಯವಸ್ಥೆ ಇಲ್ಲಿ ಫೇಲ್ ಆಗಿದೆ ಎಂದು ಡಿಕೆಶಿ ಆರೋಪಿಸಿದರು.