ಬೆಂಗಳೂರು : ಸಣ್ಣ ನಿವೇಶನದಾರರಿಗೆ ಹಣ ಪಾವತಿ ಮಾಡಲು 3 ವರ್ಷಗಳವರೆಗೆ ಕಾಲಾವಕಾಶ ನೀಡುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ನಿಯಮ 13(1) ಅನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಅರ್ಕಾವತಿ ಬಡಾವಣೆಯಲ್ಲಿ ನಿವೇಶ ಪಡೆದಿದ್ದ ಬಿ ಸಿ ಲತಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಬಿಡಿಎ ನಿಯಮದಂತೆ ಸಣ್ಣ ನಿವೇಶನಗಳ ಹಂಚಿಕೆದಾರರಿಗೆ ಮೂರು ವರ್ಷಗಳವರೆಗೆ ಕಂತು ಪಾವತಿಸಲು ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರಿಗೆ 50x80 ಅಳತೆಯ ಬಂಗಲೆ ನಿವೇಶನ ನೀಡಲಾಗಿದೆ.
ದೊಡ್ಡ ಅಳತೆಯ ನಿವೇಶನ ಪಡೆದವರಿಗೆ ಹಣ ಪಾವತಿಸಲು ಸಮಯಾವಕಾಶ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ, 20x30 ಅಳತೆ ಸೇರಿದಂತೆ ಸಣ್ಣ ನಿವೇಶಗಳ ಹಂಚಿಕೆದಾರರಿಗೆ ಹಣ ಪಾವತಿಸಲು ಕಾಲಾವಕಾಶ ನೀಡುವ ಬಿಡಿಎ ಕ್ರಮ ಸರಿಯಿದೆ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ : ಅರ್ಜಿದಾರರಾದ ಬಿ.ಸಿ.ಲತಾ ಅವರಿಗೆ 2006ರಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೋಟಾದಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು.
ಅದಕ್ಕಾಗಿ ಅವರು ಬಿಡಿಎಗೆ 7,58,500 ರೂ. ಪಾವತಿಸಬೇಕಿತ್ತು. ಅದರಂತೆ ಲತಾ 2006ರ ಆಗಸ್ಟ್ 24ರಂದು 3.65 ಲಕ್ಷ ಹಾಗೂ ಅಕ್ಟೋಬರ್ 11ರಂದು 1 ಲಕ್ಷ ರೂಪಾಯಿ ಪಾವತಿಸಿದ್ದರು.
ಉಳಿದ ಹಣ ಪಾವತಿಸದ ಹಿನ್ನೆಲೆ ಬಿಡಿಎ ಅರ್ಜಿದಾರರಿಗೆ 2009ರ ಆಗಸ್ಟ್ 5ರಂದು ನೋಟಿಸ್ ಜಾರಿ ಮಾಡಿ, ಬಾಕಿ ಹಣ ಪಾವತಿಸಿಲ್ಲವಾದ್ದರಿಂದ ನಿಮಗೆ ಹಂಚಿಕೆ ಮಾಡಿರುವ ನಿವೇಶನ ಏಕೆ ಹಿಂಪಡೆಯಬಾರದು ಎಂದು ಸೂಚಿಸಿತ್ತು.
ಇದನ್ನೂ ಓದಿ :ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಗೆ ಉತ್ತರಾಧಿಕಾರಿಯಾಗಲು ಹೆಣ್ಣು ಮಕ್ಕಳು ಅರ್ಹರು.. ಸುಪ್ರೀಂಕೋರ್ಟ್ ತೀರ್ಪು
2009ರ ನವೆಂಬರ್ 13ರಂದು ಅರ್ಜಿದಾರರ ಹಣ ಹಿಂದಿರುಗಿಸಿ ನಿವೇಶನ ಹಂಚಿಕೆಯನ್ನು ರದ್ದು ಮಾಡಿತ್ತು. ಬಿಡಿಎ ನಿವೇಶನ ಹಂಚಿಕೆ ರದ್ದುಪಡಿಸಿದ ಕ್ರಮ ಪ್ರಶ್ನಿಸಿ ಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯಲ್ಲಿ ಸಣ್ಣ ನಿವೇಶನ ಪಡೆದವರಿಗೆ ಮೂರು ವರ್ಷಗಳ ಕಾಲ ಕಂತಿನ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಿರುವ ಬಿಡಿಎ ನಿವೇಶನಗಳ ಹಂಚಿಕೆ ಕಾಯ್ದೆಯ ನಿಯಮ 13(1)ರ ಸಿಂಧುತ್ವವನ್ನೂ ಪ್ರಶ್ನಿಸಿದ್ದರು. ಹಾಗೆಯೇ, ಸಣ್ಣ ನಿವೇಶನ ಪಡೆದವರು ಮತ್ತು ಇತರರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಸಂವಿಧಾನದ ವಿಧಿ 14 ಮತ್ತು 21ರ ಉಲ್ಲಂಘನೆ ಎಂದು ಆರೋಪಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಲತಾರ ಮನವಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ವಿಭಾಗೀಯ ಪೀಠ ಮೇಲ್ಮನವಿ ವಜಾ ಮಾಡಿ, ಬಿಡಿಎ ನಿಯಮವನ್ನು ಎತ್ತಿ ಹಿಡಿದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ