ದಾವಣಗೆರೆ : ಯಮಹಾ ಆರ್ ಎಕ್ಸ್ 100 ಬೈಕ್ ಶಬ್ದಕ್ಕೆ ಮೋಹಗೊಂಡು ಬೈಕ್ ಕಳ್ಳತನಕ್ಕಿಳಿದಿದ್ದ ಆರೋಪಿಯನ್ನ ಹೆಡೆಮುರಿ ಕಟ್ಟುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಯಮಹಾ ಆರ್ ಎಕ್ಸ್ 100 ಬೈಕ್ ಸೌಂಡ್ಗೆ ಮನಸೋತಿದ್ದ ಆರೋಪಿಗಳು ಬೈಕ್ ಕೊಂಡುಕೊಳ್ಳಲು ಹಣ ಇಲ್ಲದೇ ಕಳ್ಳತನಕ್ಕೆ ಇಳಿದಿದ್ದರು. ಈ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನು ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.
ಇಬ್ಬರು ಆರೋಪಿಗಳ ಪೈಕಿ ಪೊಲೀಸರು ಓರ್ವ ಕಳ್ಳನನ್ನು ಬಂಧಿಸಿದ್ದಾರೆ. ದಾವಣಗೆರೆಯ ಎಸ್ಓಜಿ ಕಾಲೋನಿಯ ನಿವಾಸಿ ದರ್ಶನ್ ಜಿ (21) ಬಂಧಿತ ಆರೋಪಿ, ಆರೋಪಿಯಿಂದ 03 ಲಕ್ಷ ರೂ. ಮೌಲ್ಯದ 03 ಯಮಹಾ ಆರ್ಎಕ್ಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ವಿದ್ಯಾನಗರ ಠಾಣೆಯ 1 ಬೈಕ್ ಹಾಗೂ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್ ಕಳ್ಳತನ ಕೇಸ್ ಪತ್ತೆಯಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕದ ದೃಶ್ಯ ಆಧರಿಸಿ ಬಲೆ ಬೀಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೋರ್ವನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.
ಎಸ್ಪಿ ಉಮಾಪ್ರಶಾಂತ್ ಹೇಳಿದ್ದೇನು?: "ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರ್ಎಕ್ಸ್ 100 ಬೈಕ್ಗಳು ಕಳ್ಳತನ ಆಗಿದ್ದವು. ಸಿಸಿಟಿವಿ ದೃಶ್ಯ ಆಧರಿಸಿ ಎಸ್ಓಜಿ ಕಾಲೋನಿಯ ದರ್ಶನ್ ಎಂಬ ಆರೋಪಿ ಬಂಧಿಸಿದ್ದೇವೆ. ಅವನಿಂದ ಮೂರು ಲಕ್ಷ ರೂ. ಮೌಲ್ಯದ ಒಟ್ಟು ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದಿದ್ದೇವೆ, ಬೈಕ್ ವ್ಯಾಮೋಹದಿಂದ ಹೀಗೆ ಮಾಡಿದ್ದೇನೆ ಎಂದು ಆರೋಪಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ'' ಎಂದು ಮಾಹಿತಿ ನೀಡಿದರು.