ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟನ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿ ಕೊನೆಗೂ ಮಟಾಷ್ ಆಗಿದ್ದಾನೆ. ರಾಜಗೋಪಾಲನಗರ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಸ್ಲಂ ಭರತ್ ಸ್ಟಾರ್ ನಟ ಯಶ್ ಹತ್ಯೆಗೂ ಸ್ಕೆಚ್ ಹಾಕಿದ್ದ. ಆದರೆ ಈ ವಿಚಾರ ತಿಳಿದು ಸಿಸಿಬಿ ಪೊಲೀಸರು ಸ್ಲಂ ಭರತ್ನನ್ನ ಈ ಹಿಂದೆೆಯೇ ಬಂಧಿಸಿದ್ದರು. ಆದರೆ ಜೈಲಿನಿಂದ ಹೊರ ಬಂದವನು ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿ ಇದೀಗ ಪೊಲೀಸರ ಗುಂಡೇಟಿಗೆ ಹೆಣವಾಗಿದ್ದಾನೆ.
ಏನಿದು ಯಶ್ ಹತ್ಯೆ ಪ್ಲಾನ್?
ಕಳೆದ ವರ್ಷ ಮಾರ್ಚ್ 7ರಂದು ಶೇಷಾದ್ರಿಪುರಂನ ಬಿಡಿಎ ಕಚೇರಿ ಬಳಿ ಸ್ಲಂ ಭರತ್ ಸಹಚರರಾದ ನಿತೇಶ್, ನಿತ್ಯಾನಂದ, ಮಧು, ಪೃಥ್ವಿ ಎಂಬುವವರು ಸ್ಟಾರ್ ನಟನ ಹತ್ಯೆಗೆ ರೆಡಿಯಾಗಿದ್ದರು. ಈ ವಿಚಾರ ತಿಳಿದು ಸಿಸಿಬಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ್ದರು.
ನಟನೊಬ್ಬನ ಹತ್ಯೆ ಮಾಡಲು ಬಂದಿದ್ವಿ. ಸ್ಲಂ ಭರತ್ ಕಡೆಯಿಂದ ನಮಗೆ ಆದೇಶ ಬಂದಿದ್ದು ಅಷ್ಟೇ ಗೊತ್ತು. ನಾನ್ ಕಾಲ್ ಮಾಡುವಷ್ಟರಲ್ಲಿ ಬಿಡಿಎ ಕಚೇರಿ ಬಳಿ ರೆಡಿಯಾಗಿರಿ ಅಂತ ಭರತ್ ಹೇಳಿದ್ದ. ಭರತ್ನ ಮಾತಿನಂತೆ ನಾವೆಲ್ಲರೂ ಮಾರಕಾಸ್ತ್ರಗಳೊಂದಿಗೆ ಕಾದು ಕುಳಿತಿದ್ವಿ ಎಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಸಿಸಿಬಿ ಪೊಲೀಸರು ಭರತ್ನನ್ನು ವಿಚಾರಣೆಗೊಳಪಡಿಸಿ ಜೈಲಿಗಟ್ಟಿದ್ರು. ನಂತ್ರ ಮತ್ತೆ ಜಾಮೀನು ಮೇಲೆ ಹೊರ ಬಂದ ಸ್ಲಂ ಭರತ್ ಸದ್ಯ ಹೆಣವಾಗಿದ್ದಾನೆ.