ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ನೀಡಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಆಕೆಯ ತಂದೆ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಗೃಹ ಇಲಾಖೆ ಹಾಗೂ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ನಡೆದ ತನಿಖಾ ಪ್ರಗತಿ ವರದಿ ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಆದೇಶಿಸಿ ಯುವತಿ ಪರ ತಂದೆ ನೀಡಿದ ರಿಟ್ ಅರ್ಜಿಯನ್ನು ಏಪ್ರಿಲ್ 17 ಕ್ಕೆ ಹೈಕೋರ್ಟ್ ಮುಂದೂಡಿತ್ತು.
ಈ ಸಂಬಂಧ ತನಿಖಾ ವರದಿ ಸಲ್ಲಿಸುವ ಕುರಿತಂತೆ ವರದಿಯಲ್ಲಿ ಏನೆಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು? ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯದ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ, ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಆತ್ಯಾಚಾರ ಪ್ರಕರಣ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಯುವತಿ ಅಪರಾಧ ದಂಡ ಸಂಹಿತೆ (ಸಿಆರ್ ಪಿಸಿ) 164ರಡಿ ನೀಡಿದ ಹೇಳಿಕೆ, ಯುವತಿ ವಾಸವಾಗಿದ್ದ ಪಿಜಿ ಮೇಲೆ ದಾಳಿ ಮಾಹಿತಿ, ಮಹಜರು, ಮಲ್ಲೇಶ್ವರಂ ಅಪಾರ್ಟ್ಮೆಂಟ್ ಮಹಜರು ನಡೆಸಿದಾಗ ದಾಳಿ ವೇಳೆ ಸಿಕ್ಕ ಸಾಕ್ಷ್ಯ ಧಾರ ವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನವಾಗಿದೆ.
ಆರೋಪಿಗಳ ಟವರ್ ಲೊಕೇಷನ್, ಹಣದ ವಹಿವಾಟು ಬಗ್ಗೆ ವರದಿಯಲ್ಲಿ ಉಲ್ಲೇಖ ಪ್ರಕರಣ ಸಂಬಂಧ FIR ದಾಖಲಾಗಿದ್ದು, ಅದರ ಪ್ರಾಥಮಿಕ ಮಾಹಿತಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳು ತನಿಖಾಧಿಕಾರಿಗೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ: ಸಚಿವ ಸವದಿ