ಬೆಂಗಳೂರು: ಒಂದೆಡೆ ಕೊರೊನಾ ಎರಡನೆಯ ಕರಿಛಾಯೆ ಬೀರಿದರೆ ಇನ್ನೊಂದೆಡೆ ಉತ್ತಮ ಬೆಳವಣಿಗೆಗೆ ಕೂಡ ಸಾಕ್ಷಿಯಾಗಿದೆ.
ಕೊರೊನಾ ಎರಡನೆಯ ಅಲೆಯ ಸೋಂಕು ಹರಡುವಿಕೆ ಪ್ರಾರಂಭವಾದ ದಿನದಿಂದ ಬೆಂಗಳೂರಿನಲ್ಲಿ ವಾಹನ ಸಂಚಾರದಲ್ಲಿ ಗಣನೀಯ ಇಳಿಕೆ ಕಂಡಿದೆ. ನೈಟ್ ಕರ್ಫ್ಯೂ ಶನಿವಾರ ಭಾನುವಾರದ ಜನತಾ ಕರ್ಫ್ಯೂನಿಂದಾಗಿ ಸಂಪೂರ್ಣ ವಾಹನ ಸಂಚಾರ ಬಂದ್ ಅದ ಹಿನ್ನೆಲೆ ಬೆಂಗಳೂರಿನ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಕೊರೊನಾ ವೈರಸ್ ಎಲ್ಲರಲ್ಲೂ ಭೀತಿ ಹುಟ್ಟಿಸಿದ್ದರೆ, ಇನ್ನೊಂದೆಡೆ ಪರಿಸರಕ್ಕೆ ವರದಾನವಾಗಿದೆ. ಕಳೆದ ಒಂದು ವಾರದಿಂದಲೂ ನಗರದಲ್ಲಿ ವಾಯುಮಾಲಿನ್ಯದ ಮಟ್ಟ ಇಳಿದಿದ್ದು. ನೈಟ್ ಕರ್ಫ್ಯೂ ಶನಿವಾರ ಭಾನುವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆ ವಾಯು ಮಾಲಿನ್ಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಶೇ.95 ರಷ್ಟು ವಾಹನಗಳು ರಸ್ತೆಗೆ ಇಳಿದಿಲ್ಲ. ಸಾರ್ವಜನಿಕರು ವೀಕೆಂಡ್ ಕರ್ಫ್ಯೂಗೆ ಬೆಂಬಲ ನೀಡಿದ ಹಿನ್ನೆಲೆ ನಗರದಲ್ಲಿ ದಾಖಲೆ ಪ್ರಮಾಣದ ವಾಯು ಮಾಲಿನ್ಯ ಕುಸಿತ ಕಂಡಿದೆ. ಹೆಬ್ಬಾಳ, ಸಿಲ್ಕ್ ಬೋರ್ಡ್ ಹಾಗೂ ಬೆಂಗಳೂರು ಹೊರ ವಲಯ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ.
ಈ ಭಾಗದಲ್ಲಿ ಸಾಮಾನ್ಯವಾಗಿ ಉಳಿದ ದಿನಗಳಲ್ಲಿ ವಾಯು ಮಾಲಿನ್ಯ ಸೂಚ್ಯಂಕ 100ರ ಗಡಿ ದಾಟುತ್ತಿತ್ತು. ನಗರದ ಆಯ್ದ ಸ್ಥಳಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ವಾಯುಗುಣಮಟ್ಟದ ಪರಿಶೀಲನೆ ನಡೆಸಿದ್ದು, ಅದರಂತೆ ವಾಯುಗುಣ ಮಟ್ಟದ ಸೂಚ್ಯಂಕ ಈ ರೀತಿ ಇದೆ. ಹೆಬ್ಬಾಳ- 68, ಸಿಟಿ ರೈಲ್ವೆ ನಿಲ್ದಾಣ 82, ಕಾಡಬೀಸನಹಳ್ಳಿ 66, ಬಿಟಿಎಂ ಲೇಔಟ್ 36, ಸಿಲ್ಕ್ ಬೋರ್ಡ್ 70, ಬಾಪೂಜಿ ನಗರದಲ್ಲಿ 120, ಹೊಂಬೇಗೌಡ ನಗರದಲ್ಲಿ 74ಹಾಗೂ ಜಯನಗರ 5ನೇ ಹಂತದಲ್ಲಿ 64 ಸೂಚ್ಯಂಕ ದಾಖಲಾಗಿದೆ.
ಕೊರೊನಾ ಎರಡನೆಯ ಅಲೆಯ ಭೀತಿ ಸೃಷ್ಟಿಯಾದ ಹಿನ್ನೆಲೆ ನಗರದ ಗಾಳಿ ಶುದ್ಧವಾಗಿದ್ದು, ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕೊರೊನಾ ಎರಡನೆಯ ಸೋಂಕು ಭೀತಿ ಹಿನ್ನೆಲೆಯಲ್ಲಿ ನಗರದ ಹಲವು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ಮಾಡಿರುವುದರಿಂದಲೂ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಸಾಮಾನ್ಯ ದಿನಗಳಲ್ಲಿ ಮತ್ತು ವಾರಾಂತ್ಯದ ದಿನಗಳಲ್ಲಿ ನಗರದ ವಾಯುಗುಣಮಟ್ಟದ ಸೂಚ್ಯಂಕ 100 ರಿಂದ 125ರ ಗಡಿ ದಾಟುತ್ತಿತ್ತು.
ನಾಳೆಯಿಂದ 14 ದಿನಗಳ ಕೊರೊನ ಕರ್ಫ್ಯೂ ಜಾರಿಯಗಲಿದ್ದು ಇನ್ನಷ್ಟು ವಾಹನ ಸಂಚಾರವಿಲ್ಲದೆ ಮತ್ತಷ್ಟು ಸ್ವಚ್ಛ ಗಾಳಿ ರಾಜಧಾನಿಯ ಜನತೆ ಅನುಭವಿಸಲಿದ್ದಾರೆ.