ಬೆಂಗಳೂರು : ಪ್ರಶ್ನೋತ್ತರ ವೇಳೆಯಲ್ಲಿ ಸಂಬಂಧಪಟ್ಟ ಸಚಿವರೇ ಉತ್ತರ ನೀಡಬೇಕು. ಸಚಿವರು ಎಲ್ಲಿ ಹೋಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ತೋಟಗಾರಿಕಾ ಸಚಿವ ಆರ್.ಶಂಕರ್ ಪರವಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಅನಿವಾರ್ಯ ಕಾರಣ ಇದ್ದಾಗ ಮಾತ್ರ ಒಬ್ಬ ಸಚಿವರ ಪರವಾಗಿ ಮತ್ತೊಬ್ಬ ಸಚಿವರು ಉತ್ತರಿಸಬಹುದು.
ಇಲ್ಲದಿದ್ದರೆ ಸಂಬಂಧಪಟ್ಟ ಸಚಿವರೇ ತಮ್ಮ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದರು. ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್‍ನಲ್ಲಿ ಉಪಸಭಾಪತಿ ಚುನಾವಣೆ ಇತ್ತು. ಹಾಗಾಗಿ, ಸಚಿವರಿಗೆ ಅನುಮತಿ ಕೊಡಲಾಗಿತ್ತು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸ್ಫೋಟ ಪ್ರಕರಣ, ಚರ್ಚೆಗೆ ಅವಕಾಶ : ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿಗೆ ಸಂಭವಿಸಿದ ಸ್ಫೋಟ ಪ್ರಕರಣದ ಮೇಲಿನ ಚರ್ಚೆಗೆ ಸೋಮವಾರ ಅವಕಾಶ ಮಾಡಿಕೊಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ನಿಯಮ 60ರ ನಿಲುವಳಿ ಸೂಚನೆಯಡಿ ನೀಡಿರುವ ನೋಟಿಸ್‌ನ ನಿಯಮ 69ಕ್ಕೆ ಬದಲಾಯಿಸಿ ಸೋಮವಾರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಆಗ ಸಿದ್ದರಾಮಯ್ಯ ಅವರು ಮಾತನಾಡಿ, ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ನಾವು ಚರ್ಚೆ ಮಾಡುತ್ತೇವೆ. ಅಂದೇ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಳಗ್ಗೆ ಚರ್ಚೆಯಾಗಲಿ, ಸಂಜೆ ವೇಳೆಗೆ ಸರ್ಕಾರದಿಂದ ಉತ್ತರ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಮೇ 24ರಿಂದ ಜೂನ್ 10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ..