ಬೆಂಗಳೂರು:ಲೋಕಸಭೆಯಲ್ಲಿ ಎಸ್‍ಸಿ ಸಮುದಾಯದ ಒಳಮೀಸಲಾತಿ ವಿಚಾರದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು, ಸಂವಿಧಾನದ ಆರ್ಟಿಕಲ್ 341 ಅಡಿಯಲ್ಲಿ ಯಾವುದೇ ಒಳಮೀಸಲಾತಿಗೆ ಸ್ಪಷ್ಟ ನಿರ್ದೇಶನ ಇಲ್ಲ ಎಂಬ ವಿಚಾರ ಪ್ರಸ್ತಾಪಿಸಿ ಪ್ರಶ್ನೆಗೆ ಸೀಮಿತ ಉತ್ತರ ಕೊಟ್ಟಿದ್ದಾರೆ.
ಅದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದುರುದ್ದೇಶದಿಂದ ಮತ್ತು ಎಸ್‍ಸಿ ಜನಾಂಗದ ಮಧ್ಯೆ ಗೊಂದಲ ಸೃಷ್ಟಿಸಲು ಕೇಂದ್ರ ಸರಕಾರ ಹಾಗೂ ಹಿಂದಿನ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸುಳ್ಳು ಹೇಳಿ ಮೋಸ ಮಾಡುವುದರಲ್ಲಿ ನಿಸ್ಸೀಮರು. ರಾಜ್ಯದ ಮುಖ್ಯಮಂತ್ರಿಯಾಗಿ 2013ರಿಂದ 2018ರ ವರೆಗೆ ಅವಕಾಶ ಇತ್ತು. ಈಗಲೂ ಅವರಿಗೆ ರಾಜ್ಯದ ಜನರು ಮುಖ್ಯಮಂತ್ರಿ ಮಾಡಿ ಅವಕಾಶ ಕೊಟ್ಟಿದ್ದಾರೆ. ಎಸ್‍ಸಿ ಒಳಮೀಸಲಾತಿಗಾಗಿ ಅಸ್ಪೃಶ್ಯ ಸಮಾಜದ ಕೆಲವು ಪಂಗಡದವರು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಅವರಿಗೆ ಸಾಮಾಜಿಕ ನ್ಯಾಯ ನೀಡಲು, 101 ಜಾತಿಗೆ ಅನ್ಯಾಯ ಆಗದ ರೀತಿ ಒಳ ಮೀಸಲಾತಿ ಕೊಡಬೇಕಿತ್ತು ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರಕಾರ ಇದ್ದಾಗ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿತ್ತು. ಅಲ್ಲಿ ನಿರ್ಣಯಿಸಿ ಜನಸಂಖ್ಯೆಗೆ ಅನುಗುಣವಾಗಿ 101 ಜಾತಿಗೆ ಅನ್ಯಾಯ ಆಗಲಾರದ ರೀತಿಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆವು. ರಾಜ್ಯಪಾಲರ ಅನುಮೋದನೆ ಪಡೆದು ಇದನ್ನು ಕಳಿಸಿದ್ದೆವು. 4 ಗುಂಪುಗಳಾಗಿ ವಿಂಗಡಿಸಿ ಸಂವಿಧಾನ ತಿದ್ದುಪಡಿಗೆ ಶಿಫಾರಸು ಮಾಡಿದ್ದೆವು.
ನಾವು ಮೋಸ ಮಾಡಿದ್ದಾಗಿ ಸಿದ್ದರಾಮಯ್ಯರು ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಜನರಿಗೆ ಕಾಂಗ್ರೆಸ್ಸಿನಿಂದ ಮೋಸ ಆಗುತ್ತಿದೆ. ನಮ್ಮ ಪಕ್ಷ, ನಮ್ಮ ಸರ್ಕಾರ, ಆರೆಸ್ಸೆಸ್ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಸ್ಪಷ್ಟಪಡಿಸಿದರು. ಸಾಮಾಜಿಕ ನ್ಯಾಯದ ಜೊತೆ ಸಂವಿಧಾನದ ಆಶಯದಲ್ಲಿ ನಡೆಯುತ್ತೇವೆ. ಸಿದ್ದರಾಮಯ್ಯರ ಮಾತಿಗೆ ಕಿವಿಗೊಡದಿರಿ ಎಂದು ವಿನಂತಿಸಿದರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಆರ್ಟಿಕಲ್ 341ಗೆ ತಿದ್ದುಪಡಿ ಮಾಡಿ ಒಳ ಮೀಸಲಾತಿ ಕೊಡುವ ವಿಚಾರ ಇದಾಗಿದೆ. ಇದೇ ವಿಷಯದಡಿ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ. 13 ರಾಜ್ಯಗಳು ಗೊಂದಲ ಇರದ ಕಾರಣ ಒಳಮೀಸಲಾತಿ ಬೇಕಿಲ್ಲ ಎಂದಿವೆ. ಕರ್ನಾಟಕ ಸೇರಿ 7 ರಾಜ್ಯಗಳು ಒಳಮೀಸಲಾತಿ ಕೋರಿವೆ. 2-3 ರಾಜ್ಯಗಳು ತಟಸ್ಥ ನೀತಿ ಅನುಸರಿಸಿವೆ ಎಂದು ಸಚಿವರು ಉತ್ತರ ಕೊಟ್ಟ ಬಗ್ಗೆ ತಿಳಿಸಿದರು.
ನೆರೆಯ ಆಂಧ್ರ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಿತ್ತು. ಹಲವು ಜಾತಿಗಳು ಕೋಷ್ಟಕದಲ್ಲಿ ಸೇರಿ ಶೆಡ್ಯೂಲ್ಡ್ ಕಾಸ್ಟ್ ಆಗಿದೆ ಎಂದಿದ್ದ ಸುಪ್ರೀಂ ಕೋರ್ಟ್, ಕೇಂದ್ರದ ಸಂವಿಧಾನದ ತಿದ್ದುಪಡಿ ಸೂಚಿಸಿತ್ತು. ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ, ಮೋಸ ಎಂದಿದ್ದಾರೆ. ವಾಸ್ತವವಾಗಿ ದಲಿತರು, ಪರಿಶಿಷ್ಟ ಜಾತಿಯವರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಪರಿಶಿಷ್ಟ ಜಾತಿಗೆ ಶೇ 15ರಿಂದ 17, ಪರಿಶಿಷ್ಟ ಪಂಗಡಕ್ಕೆ 3ರಿಂದ 7ಕ್ಕೆ ಮೀಸಲಾತಿಯನ್ನು ನಾವು (ಬಿಜೆಪಿ) ಹೆಚ್ಚಿಸಿದ್ದೆವು. ನ್ಯಾ. ಸದಾಶಿವ ಆಯೋಗದ ವರದಿಗೆ ಮೊದಲ ಅಧಿವೇಶನದಲ್ಲೇ ಅನುಮೋದನೆ ನೀಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಆದರೆ, ಮೊದಲ ಅಧಿವೇಶನ ಆದರೂ ಅದನ್ನು ಮಂಡಿಸಿಲ್ಲ ಎಂದು ಟೀಕಿಸಿದರು.
ಪ್ರಾಥಮಿಕವಾಗಿ ಎಸ್‍ಸಿ ವರ್ಗದಲ್ಲಿ ಆರೇಳು ಜಾತಿಗಳಿದ್ದವು. ಅಸ್ಪೃಶ್ಯ ಜನಾಂಗಗಳಷ್ಟೇ ಇದ್ದವು. ಕಾಂಗ್ರೆಸ್ ಬೇಕಾದವರನ್ನೆಲ್ಲ ತುಂಬಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳಿದ್ದೆವು. ಬಿಜೆಪಿ ನ್ಯಾಯ ನೀಡಿತು. ಒಳ ಮೀಸಲಾತಿ ನೀಡಿದ್ದು ಅನ್ಯಾಯವೇ? ಅಸ್ಪೃಶ್ಯರ ಹೋರಾಟ ನಡೆಯಿತು. ಎಲ್ಲರಿಗೂ ನ್ಯಾಯ ಕೊಡಲು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಲಾಗಿದೆ.
ಕಾಂಗ್ರೆಸ್ ಪಕ್ಷದವರು ಜನರನ್ನು ದಾರಿ ತಪ್ಪಿಸಿ ದಲಿತರು ಕಾಂಗ್ರೆಸ್ಸಿಗೆ ಮತ ಹಾಕುವಂತೆ ನೋಡಿಕೊಂಡರು. ಆದರೆ, ಅವರಿಗೆ ನ್ಯಾಯ ಕೊಡುತ್ತಿಲ್ಲ ಎಂದರಲ್ಲದೇ, ಇದಕ್ಕೆ ಉತ್ತರ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಬಾಯಿಯಲ್ಲಿ ಪ್ರೇಮ ಬೇಡ. ಕಾರ್ಯದಲ್ಲಿ ಪ್ರೀತಿ ತೋರಿಸಿ. ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಒತ್ತಾಯಿಸಿದರು.
ಇದನ್ನೂಓದಿ: ಸಿದ್ದರಾಮಯ್ಯ ಅನರ್ಹತೆ ಕೋರಿ ಅರ್ಜಿ: ಸಿಎಂಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್