ಬೆಂಗಳೂರು: ವಿಪಕ್ಷ ನಾಯಕರಿಗೆ ಮಾತನಾಡಲು ಹೆಚ್ಚು ಸಮಯ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್‌ಗೆ ಮನವಿ ಮಾಡಿಕೊಂಡರು. ಬೆಲೆ ಏರಿಕೆ ಕುರಿತಾದ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡನೆ ಮಾಡಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.
ನಾಳೆ ಚರ್ಚೆಗೆ ಅವಕಾಶ ಕೊಡುವ ಭರವಸೆ ನೀಡಿದ ಸ್ಪೀಕರ್, ಕಾಲಮಿತಿಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದರು. ಆಗ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ಚರ್ಚೆ ನಡೆಸಲಿದ್ದೇವೆ. ಇದಕ್ಕೆ ಯಾವುದೇ ಕಾಲಮಿತಿ ಹಾಕದಂತೆ ಮನವಿ ಮಾಡಿದರು. ವಿಪಕ್ಷ ನಾಯಕರ ಹಕ್ಕು ಮೊಟಕುಗೊಳಿಸಬಾರದು, ನಿಮ್ಮ ಕಾಲದಲ್ಲಿ ಹೀಗೆಲ್ಲಾ ಆಗಬಾರದು ಬೊಮ್ಮಾಯಿ ಅವರೇ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ, ವಿಪಕ್ಷ ನಾಯಕರು ಎಷ್ಟು ಬೇಕಾದರೂ ಸಮಯ ತೆಗೆದುಕೊಳ್ಳಲಿ, ಆದರೆ ವಿಪಕ್ಷ ನಾಯಕರ ಸಮಯದ ಬಳಿಕ ಸಿದ್ದರಾಮಣ್ಣನ ಟೈಮ್ ಅಂತಾ ಬೇರೆ ಇರುತ್ತದೆ, ಅದು ಬೇಡ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದನ್ನೂ ಓದಿ: ಡಿಸೆಂಬರ್ ಅಂತ್ಯದ ವೇಳೆಗೆ 3 ಲಕ್ಷ ಎಲ್ಇಡಿ ಬೀದಿ ದೀಪ ಅಳವಡಿಕೆ : ಸಿಎಂ ಬಸವರಾಜ ಬೊಮ್ಮಾಯಿ