ಬೆಂಗಳೂರು: ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಒಂದೊಮ್ಮೆ ಟ್ಯಾಪಿಂಗ್ ಮಾಡಿದ್ದರೆ ಈಗ ಅದರ ಬಗ್ಗೆ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಫೋನ್ ಟ್ಯಾಪಿಂಗ್ ಆರೋಪ ವಿಚಾರ ಮಾತನಾಡಿದ ಅವರು, ಯಾರೇ ಇದರಲ್ಲಿ ಭಾಗಿ ಆಗಿರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಫೋನ್ ಟ್ಯಾಪಿಂಗ್ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ದೇಶದ ಐಕ್ಯತೆ, ಸಾಮಾಜಿಕತೆ ಉಳಿಸಬೇಕು 72ನೇ ವರ್ಷಾಚರಣೆ ಮುಗಿಸಿ 73ನೇ ಸ್ವಾತಂತ್ರ್ಯ ದಿನವನ್ನ ಆಚರಿಸುತ್ತಿದ್ದೇವೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆಯಿಲ್ಲ. ಅಂತವರು ಅಧಿಕಾರಕ್ಕೆ ಬಂದಾಗ ಇಂಥ ಪರಿಸ್ಥಿತಿ ಬರಲಿದೆ. ನಾವೆಲ್ಲರೂ ಪ್ರತಿಜ್ಞೆಯನ್ನು ಮಾಡಬೇಕು. ಪ್ರಜಾಪ್ರಭುತ್ವವನ್ನ ನಾವು ಉಳಿಸುವ ಕೆಲಸ ಮಾಡಬೇಕು. ದೇಶದ ಐಕ್ಯತೆ,ಸಾಮಾಜಿಕತೆ ಉಳಿಸಬೇಕು ಎಂದರು.
ಹುತಾತ್ಮರಾದ ಗಾಂಧೀಜಿ, ಸರ್ದಾರ್ ವಲ್ಲಭಾಯ್ ಪಟೇಲ್, ಆಜಾದ್, ನೆಹರೂ ಹೀಗೆ ಅನೇಕರು ತಮ್ಮ ಪ್ರಾಣ ಕಳೆದುಕೊಂಡು ಸ್ವಾತಂತ್ರ ಕೊಡಿಸಿದ್ದಾರೆ. ಇವತ್ತು ಎಲ್ಲ ಹುತಾತ್ಮರನ್ನು ನಾವೆಲ್ಲ ಸ್ಮರಿಸಿಕೊಂಡು ಅವರಿಂದ ಸ್ಪೂರ್ತಿ ಪಡೆಯಬೇಕು. ಐಕ್ಯತೆ, ಸಾರ್ವಭೌಮತೆ, ಪರಧರ್ಮ ಸಹಿಷ್ಣುತೆ ಯನ್ನ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.