ಬೆಂಗಳೂರು : ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು ಎಂಬ ಬಿಜೆಪಿ ಹೇಳಿಕೆಗೆ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಜಯಚಂದ್ರ ಮುದಿ ಎತ್ತು ಎಂದು ಬಿಜೆಪಿ ಹೇಳಿಕೆ ನೀಡಿದೆ. ಹಾಗಾದ್ರೆ ಯಡಿಯೂರಪ್ಪ, ದೇವೇಗೌಡರು, ನರೇಂದ್ರ ಮೋದಿ ಎರಡು ಹಲ್ಲು ಇರುವ ಎತ್ತುಗಳಾ? ಎಂದು ಬಿಜೆಪಿ ಹಾಗೂ ಜೆಡಿಎಸ್ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಶಿರಾದಲ್ಲಿ ಬಿಜೆಪಿ ದುಡ್ಡು ಚೆಲ್ಲುತ್ತಿದೆ. ಅವರು ಎಷ್ಟೇ ದುಡ್ಡು ಎರಚಿದ್ರೂ ಶಿರಾ, ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿನ್ನೆ ಆರ್. ಆರ್. ನಗರದಲ್ಲಿ ಗಲಾಟೆ ವಿಚಾರ ಮಾತನಾಡಿ, ಮುನಿರತ್ನ ಈ ರೀತಿ ಗಲಾಟೆ ಮಾಡಿಸ್ತಿದ್ದಾರೆ ಎಂಬ ಅನುಮಾನ ಇದೆ. ಜಿ.ಕೆ ವೆಂಕಟೇಶ್ ಅವರನ್ನ ಪೊಲೀಸರು ಬಂಧಿಸಲಿ. ಅಲ್ಲಿನ ಪಿಎಸ್ಐ ಮುನಿರತ್ನ ಪರ ಇದ್ದು, ಕೂಡಲೇ ಕ್ರಮ ಕೈಗೊಳ್ಳಲಿಲ್ಲ. ಎಷ್ಟೋ ಹೊತ್ತು ಆದ್ಮೇಲೆ FIR ದಾಖಲಿಸಿದ್ದಾರೆ. ಮುನಿರತ್ನ ಮೊದಲಿನಿಂದಲೂ ಇದೇ ರೀತಿ ಮಾಡ್ತಿದ್ದಾನೆ. ಸೋಲಿನ ಭಯದಿಂದ ಗಲಾಟೆ ಮಾಡಿಸಿರಬಹುದು. ನಾಡಿದ್ದು, ಮತ್ತೆ ರಾಜರಾಜೇಶ್ವರಿ ನಗರದಲ್ಲಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದರು.
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ವಿಚಾರ ಮಾತನಾಡಿ, ಅಭಿಮಾನದಿಂದ ಹೇಳುತ್ತಾರೆ. ಆದ್ರೆ ನಮ್ಮ ಪಕ್ಷದಲ್ಲಿ ಒಂದು ಸಂಪ್ರದಾಯವಿದೆ. ಪಕ್ಷ ಅಧಿಕಾರಕ್ಕೆ ಬರುವಷ್ಟು ಶಾಸಕರು ಗೆದ್ದ ಬಳಿಕ ಸಿಎಂ ಅಭ್ಯರ್ಥಿ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.