ಬೆಂಗಳೂರು : ಸ್ವಾಮಿಗಳ ಮೇಲಿನ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ. ಹಿಜಾಬ್ ಸಂಬಂಧ ಸ್ವಾಮಿಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಸದ್ಯ ಭಾರೀ ಸದ್ದು ಮಾಡಿದೆ. ಅವರ ಹೇಳಿಕೆ ಇದೀಗ ವಿವಾದಕ್ಕೆ ತಿರುಗಿದ್ದು, ಬಿಜೆಪಿ ಮುಖಂಡರು ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಆ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಲು ಬಿಜೆಪಿ ಮುಂದಾಗಿದೆ. ಇತ್ತ ಸಿದ್ದರಾಮಯ್ಯರ ಈ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ನಾಯಕರೂ ತೀವ್ರ ಮುಜುಗರ ಎದುರಿಸುವಂತಾಗಿದೆ. ಸಿದ್ದರಾಮಯ್ಯ ಹೇಳಿಕೆಯಿಂದ ಬಹುಸಂಖ್ಯಾತ ಹಿಂದೂಗಳ ವಿರೋಧ ಕಟ್ಟಿಕೊಳ್ಳುವ ಆತಂಕ ಕಾಂಗ್ರೆಸ್ಗೆ ಎದುರಾಗಿದೆ.
ಬಿಜೆಪಿ ನಾಯಕರು ಈಗಾಗಲೇ ಸಿದ್ದರಾಮಯ್ಯರ ಈ ಹೇಳಿಕೆ ಮುಂದಿಟ್ಟುಕೊಂಡು, ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಹಿಜಾಬ್ ವಿವಾದ, ಪಠ್ಯ ಕ್ರಮದಲ್ಲಿ ಭಗವದ್ಗೀತೆ ವಿಚಾರಗಳಿಂದ ಕಾಂಗ್ರೆಸ್ಗೆ ಹಿನ್ನಡೆಯಾಗುತ್ತಿದೆ. ಈ ನಡುವೆ ಸಿದ್ದರಾಮಯ್ಯರ ಸ್ವಾಮೀಜಿಗಳ ಮೇಲಿನ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಚುನಾವಣೆ ವೇಳೆ ರಾಜಕೀಯವಾಗಿ ಸಿದ್ದರಾಮಯ್ಯರ ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ಕಾಂಗ್ರೆಸ್ನಲ್ಲಿದೆ.
ಈ ಹೇಳಿಕೆಯಿಂದ ಆಗಬಹುದಾದ ಹಾನಿಯನ್ನು ಅರಿತ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡಿದ್ದಾರೆ. ಆ ಹೇಳಿಕೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅವರ ಹೇಳಿಕೆಗೆ ಅವರೇ ಉತ್ತರ ಕೊಡುತ್ತಾರೆ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇನ್ನು ಪ್ರಿಯಾಂಕ್ ಖರ್ಗೆ ಕೂಡ ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಳಿದಾಗ ಇದನ್ನು ಅವರಿಗೆ ಕೇಳಬೇಕು ಎಂದು ಜಾರಿಕೊಂಡರು. ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯರ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಜಿ.ಪಂ., ತಾ.ಪಂ. ಚುನಾವಣಾ ತಯಾರಿ.. ಸಿಎಂ ಬೊಮ್ಮಾಯಿ, ಬಿಎಸ್ ವೈ, ಕಟೀಲ್ ನೇತೃತ್ವದಲ್ಲಿ ರಾಜ್ಯ ಪ್ರವಾಸ