ಬೆಂಗಳೂರು: ಬಿಜೆಪಿ ಅವರು ಯಾವತ್ತು ನೇರವಾಗಿ ಅಧಿಕಾರಕ್ಕೆ ಬಂದವರಲ್ಲ. ಹಿಂಬಾಗಿಲಿನ ಮೂಲಕ ಸರ್ಕಾರ ರಚನೆ ಮಾಡಿದವರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ರಾಜಭವನದ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನವನ್ನು ಹಾಳು ಮಾಡುವುದಷ್ಟೇ ಅವರಿಗೆ ಗೊತ್ತಿರುವುದು. ಇವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ವೀರ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರಾದರೂ ಆ ರೀತಿ ಹೇಳಿಕೆ ನೀಡಿದರೆ, ಅವರ ವಿರುದ್ಧ ಕ್ರಮ ತೆಗದುಕೊಳ್ಳಲಿ. ಸರ್ಕಾರ ಅವರದ್ದೇ ಇದೆ. ಮತ್ತೇಕೆ ಸುಮ್ಮನಿದ್ದಾರೆ. ಯಾರೇ ಮಾತನಾಡಿದರೂ ಅದು ತಪ್ಪು. ಕ್ರಮ ತೆಗದುಕೊಳ್ಳಬೇಡಿ ಎಂದು ಯಾರು ಅಡ್ಡಿಪಡಿಸಿದ್ದಾರೆ. ನಾವು ಯಾರು ಮಧ್ಯಪ್ರವೇಶ ಮಾಡಿಲ್ಲ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬಿಜೆಪಿ ನಿರ್ಧಾರ: ಯು.ಟಿ. ಖಾದರ್
ಮಧ್ಯಪ್ರದೇಶ ಸರ್ಕಾರ ಬೀಳಿಸಲು ಬಿಜೆಪಿ ನಡೆಸುತ್ತಿರುವ ಯತ್ನದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಯು.ಟಿ. ಖಾದರ್, ಜನರಿಂದ ಆಯ್ಕೆಯಾದ ಸರ್ಕಾರವನ್ನು ಇಂದು ಬುಡಮೇಲು ಮಾಡಿ, ಆ ರಾಜ್ಯದ ಜನ ಅಧಿಕಾರ ನೀಡದಿದ್ದರೂ ಸಹ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಆಪರೇಷನ್ ಕಮಲ ನಡೆಸುವ ಯತ್ನಕ್ಕೆ ಬಿಜೆಪಿ ಮುಂದಾಗಿರುವುದು ನಿಜಕ್ಕೂ ಖಂಡನೀಯ ಎಂದರು.
ಕರ್ನಾಟಕದಲ್ಲಿ ಕೂಡ ಇಂತಹ ಪ್ರಯತ್ನ ನಡೆದಾಗ ಅದನ್ನು ವಿರೋಧಿಸಿದ್ದೆವು. ಇಂತಹ ಪ್ರಯತ್ನ ಬೇಡ. ಜನಸಾಮಾನ್ಯರಿಗೆ ಕಷ್ಟವಾಗಲಿದೆ ಎಂದು ಹೇಳಿದ್ದೆವು. ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದ ನಂತರ ಒಂದು ವರ್ಷ ಸರಿಯಾಗಿ ಆಡಳಿತ ನಡೆಸಲು ಆಗಲಿಲ್ಲ. ಜನರಿಗೆ ಯಾರ ಬಳಿ ತೆರಳಿ ಮನವಿ ಸಲ್ಲಿಸಬೇಕು ಎನ್ನುವುದೇ ತಿಳಿಯಲಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿಲ್ಲ. ಕೇವಲ ಒಂದು ಆಪರೇಷನ್ ಕಮಲದಿಂದ ಅಭಿವೃದ್ಧಿ ಇಂದಿಗೂ ನಿಂತಿದೆ. ಇಂತಹ ಬೆಳವಣಿಗೆಯ ಅಗತ್ಯತೆ ನಮಗಿಲ್ಲವಲ್ಲ. ಇದನ್ನು ನಾವು ಖಂಡಿಸುತ್ತೇವೆ. ಇಂಥವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಇವೆಲ್ಲಾ ತಾತ್ಕಾಲಿಕ. ಮಧ್ಯಪ್ರದೇಶದ ಇಂದಿನ ಬೆಳವಣಿಗೆಯ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ. ಬಿಜೆಪಿಗೆ ದೇಶದ ಯಾವ ಭಾಗದಲ್ಲಿಯೂ ಜನಮನ್ನಣೆ ಇಲ್ಲ. ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಯಾವ ರಾಜ್ಯಗಳಲ್ಲಿ ಇವರಿಗೆ ಬಹುಮತ ಇಲ್ಲ. ಇಂದು ಮತ್ತೊಮ್ಮೆ ಮಧ್ಯಪ್ರದೇಶ ಸರ್ಕಾರ ಕೆಡವಲು ಮೂವರು ಶಾಸಕರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರಲಾಗಿದೆ ಎಂಬ ಮಾಹಿತಿ ಇದೆ. ಈ ಪ್ರಯತ್ನ ಕೂಡ ಯಶಸ್ಸು ಕಾಣುವುದಿಲ್ಲ ಎಂದು ಮಾಜಿ ಸಚಿವ ಖಾದರ್ ಕಿಡಿಕಾರಿದರು.