ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ನೀಡಿವ ಬಗ್ಗೆ ನಮ್ಮ ಬೇಡಿಕೆ ಈಡೇರುವವರೆಗೂ ಸದನದಲ್ಲಿ ಕಾಂಗ್ರೆಸ್ ಹೋರಾಟ ಮುಂದುವರೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ವಿಷಯದ ಬಗ್ಗೆ ಚರ್ಚೆ ನಡೆಸಲು ನಿರ್ದಿಷ್ಟವಾದ ನಿಯಮ ಇಲ್ಲದಿದ್ದರೆ ಸ್ಪೀಕರ್ ವಿವೇಚನಾಧಿಕಾರ ಬಳಸಿ ಅವಕಾಶ ಕೊಡಬಹುದು. ನೊಟೀಸ್ ಕೊಡಲೇಬೇಕು ಎಂದು ನಿಯಮ ಇಲ್ಲ. ಆದರೂ ಸ್ಪೀಕರ್ ವಿವೇಚನಾಧಿಕಾರ ಚಲಾಯಿಸಲು ತಯಾರಿಲ್ಲ. ದೊರೆಸ್ವಾಮಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋದವರು. ಈ ಬಗ್ಗೆ ಚರ್ಚೆಗೆ ನಾವು ತಯಾರಿದ್ದೇವೆ ಆದರೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಯತ್ನಾಳ್ ಹೇಳಿಕೆಯನ್ನು ಸಿಎಂ ಇದುವರೆಗೂ ಖಂಡಿಸಿಲ್ಲ. ಯಡಿಯೂರಪ್ಪನವರು ಮೌನಕ್ಕೆ ಶರಣಾಗಿದ್ದಾರೆ. ಆ ಮೂಲಕ ಯತ್ನಾಳ್ಗೆ ಬೆಂಬಲ ನೀಡಿದ್ದಾರೆ. ಹಿಂದೆ ಅನಂತ್ ಕುಮಾರ್ ಹೆಗಡೆ ಕೇಸ್ನಲ್ಲೂ ಇದೇ ರೀತಿ ಮಾಡಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ 14 ತಿಂಗಳು ದೊರೆಸ್ವಾಮಿ ಜೈಲಿನಲ್ಲಿ ಇದ್ದರು. ನಂತರ ತುರ್ತುಪರಿಸ್ಥಿತಿಯಲ್ಲಿಯೂ ಜೈಲಿಗೆ ಹೋಗಿದ್ದರು. ಇಂತಹವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆ ಮೂಲಕ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ಅವಮಾನ ಮಾಡಿದ್ದಾರೆ. ಹಾಗಾಗಿ ನಾವು ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ಧರಣಿ ಮಾಡುತ್ತಿದ್ದೇವೆ ಈ ಪ್ರಕರಣ ಇತ್ಯರ್ಥ ಆಗೋವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದರು.