ಬೆಂಗಳೂರು: ರಾಜ್ಯದ ವಿವಿಧ ವಿಚಾರಗಳ ಮೇಲೆ ನಾವು ವ್ಯಾಪಕ ಚರ್ಚೆ ನಡೆಸಬೇಕಿತ್ತು. ಪ್ರವಾಹ, ಅತಿವೃಷ್ಠಿ ಬಗ್ಗೆ ನಿಲುವಳಿ ಕೊಟ್ಟಿದ್ದೆ, ಚಚೆಗೆ ತೆಗೆದುಕೊಂಡರೂ ಸಮಂಜಸ ಉತ್ತರ ನೀಡಲಿಲ್ಲ. ಪಿಎಸ್ಐ ಹಗರಣ ಕುರಿತು ಸುದೀರ್ಘ ಚರ್ಚೆಗೆ ಸರ್ಕಾರ ಅವಕಾಶವನ್ನೇ ನೀಡಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವಿಧಾನಸೌಧದ ಪ್ರತಿಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಧಿಕಾರಿಗಳನ್ನ ಮಾತ್ರ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಎಡಿಜಿಪಿಯ ಮಂಪರು ಪರೀಕ್ಷೆಯಾಗಬೇಕು. 164ಅಡಿ ಸ್ಟೇಟ್ ಮೆಂಟ್ ಆಗಬೇಕು. ಆಗ ಮಾತ್ರ ಇದರ ಹಿಂದಿರುವ ರಾಜಕಾರಣಿಗಳು ಯಾರು ಎಂದು ಗೊತ್ತಾಗಲಿದೆ. ಶಾಸಕ ಬಸವರಾಜ ದಡೇಸಗೂರ್ ಆಡಿಯೋ ರಿಲೀಸ್ ಆಗಿದೆ. ನನ್ನದೇ ಧ್ವನಿ ಅಂತ ಒಪ್ಪಿಕೊಂಡಿದ್ದಾರೆ. 15 ಲಕ್ಷ ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದಿದ್ದಾನೆ. ಇದಕ್ಕೆ ಸರಿಯಾದ ಉತ್ತರ ಸರ್ಕಾರವೇ ನೀಡಬೇಕು ಎಂದರು.
ಒತ್ತಡಕ್ಕೆ ಮಣಿದು ಸಿಐಡಿ ತನಿಖೆ: ಪಿಎಸ್ಐ ನೇಮಕಾತಿ ಹಗರಣ ಪ್ರಸ್ತಾಪ ಮಾಡಿ ನಿಲುವಳಿ ಸೂಚನೆಯಡಿ ಚರ್ಚೆಗೆ ಕೇಳಿದ್ದೆ. ಅದರ ಬಗ್ಗೆಯೂ ಚರ್ಚೆಯಾಯ್ತು. ಹಗರಣದಲ್ಲಿ ಎಡಿಜಿಪಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದೆ. ಮೊದಲಿಗೆ ಪ್ರಸ್ತಾಪ ಮಾಡಿದ ವೇಳೆ ಅಕ್ರಮ ನಡೆದಿಲ್ಲ ಎಂದಿದ್ದರು. ಒತ್ತಡಕ್ಕೆ ಮಣಿದು ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಯತ್ನಾಳ್, ಸಿಎಂ ಮಗನ ಕೈವಾಡ ಅಂತ ಹೇಳಿದ್ದಾರೆ. ಯಾರು ಅನ್ನೋದನ್ನ ವಿಚಾರಣೆ ಮಾಡಿಲ್ಲ. 92 ಜನರನ್ನ ಅರೆಸ್ಟ್ ಮಾಡಿದ್ದಾರೆ. ರಾಜಕಾರಣಿಗಳನ್ನ ಯಾರು ಅರೆಸ್ಟ್ ಮಾಡಿಲ್ಲ ಎಂದು ತಿಳಿಸಿದರು.
ನ್ಯಾಯಾಂಗ ತನಿಖೆ : ಕಮಿಷನ್ ಬಗ್ಗೆ ಪ್ರಧಾನಿಗೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಪತ್ರ ಬರೆದಿದೆ. ನಂತರ ರಾಜ್ಯಪಾಲರು, ಸಿಎಂಗೆ ಪತ್ರ ಬರೆದಿದ್ದಾರೆ. ಮಾಧುಸ್ವಾಮಿ, ಕಾರಜೋಳ, ಸಿ.ಸಿ.ಪಾಟೀಲ್ ಭೇಟಿ ಮಾಡಿದ್ದಾರೆ. ಸಿಎಂ ಒಂದು ಸಭೆಯನ್ನೂ ಕರೆದಿದ್ದಾರೆ. 80% ಹೋದ್ರೆ 20% ಕೆಲಸ ಆಗುತ್ತಾ? ಇಷ್ಟೆಲ್ಲಾ ಆದ್ರೂ ಸಿಎಂ ದಾಖಲೆ ಕೊಡಿ ಅಂತಾರೆ. ಕೆಂಪಣ್ಣ ನ್ಯಾಯಾಂಗ ತನಿಖೆ ಮಾಡಿ ಅಂತಾರೆ. ಆದರೆ ಸರ್ಕಾರ ಅದಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ಎಲ್ಲಾ ವಿಭಾಗದಲ್ಲೂ ಭ್ರಷ್ಟಾಚಾರ : ಅರ್ಬನ್ ಡೆವಲಪ್ ಮೆಂಟ್, ಲೋಕೋಪಯೋಗಿ, ಹೆಲ್ತ್ ಡಿಪಾರ್ಟ್ಮೆಂಟ್ ಎಲ್ಲದರಲ್ಲಿ ಭ್ರಷ್ಟಾಚಾರ ನಡೆದಿದೆ. ಸುಧಾಕರ್, ಕಾರಜೋಳ, ಮುನಿರತ್ನ ಹೆಸರು ಹೇಳಿದ್ದಾರೆ. ಕೆಂಪಣ್ಣ ಭ್ರಷ್ಟಾಚಾರದಲ್ಲಿ ಇವರ ಹೆಸರು ಹೇಳಿದ್ದಾರೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇವರು ನ್ಯಾಯಾಂಗ ತನಿಖೆಗೆ ಕೊಡಲಿ. ನಾನು ನೊಟೀಸ್ ಕೊಟ್ಟು ಮೂರು ದಿನಗಳಾಯ್ತು. ಚರ್ಚೆಗೆ ಇವರು ಅವಕಾಶವನ್ನೇ ಕೊಡಲಿಲ್ಲ. ನಿನ್ನೆ ಇಡೀ ದಿನ ಚರ್ಚೆ ಮಾಡಿ ಸದನ ಮುಂದೂಡಿದ್ರು. ನಾನು ಮಾತನಾಡೋಕೆ ರೆಡಿಯಿದ್ದೆ. ಸೋಮವಾರ ಮಾಡಿ ಅಂತ ನಾನು ಸಲಹೆ ಕೊಟ್ಟೆ. ಅವರು ಚರ್ಚೆ ಮಾಡೋಕೆ ತಯಾರಿಲ್ಲ ಎಂದರು.
ನಾವು ಪ್ರಾಮಾಣಿಕ ತನಿಖೆ ಮಾಡಿಸಿದ್ದೆವು : ಪ್ರಾಮಾಣಿಕರಾಗಿದ್ದರೆ ಯಾಕೆ ಹೆದರ್ತೀರ. ಡಿ.ಕೆ.ರವಿ, ಗಣಪತಿ, ಪರೇಶ್ ಮೆಸ್ತಾ ಪ್ರಕರಣ ಸಿಬಿಐಗೆ ಕೊಟ್ಟೆ. ಸೌಜನ್ಯ ಕೊಲೆ ಪ್ರಕರಣ ಸಿಬಿಐಗೆ ಕೊಟ್ಟಿದ್ದೆ. ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣ ಸಿಬಿಐಗೆ ಕೊಟ್ಟಿದ್ದೆ. ರಾಮನಗರ ಅಭಿವೃದ್ಧಿ ಪ್ರಾಧಿಕಾರ, ಮೂಡ, ಅನುರಾಗ್ ತಿವಾರಿ ಆತ್ಮಹತ್ಯೆ ಕೇಸ್ ಇವೆಲ್ಲವನ್ನೂ ನಾವು ಸಿಬಿಐಗೆ ಕೊಟ್ಟಿದ್ದೆವು. ಇವರು ಯಾವ ಕೇಸ್ ಕೊಟ್ಟಿದ್ದಾರೆ ಹೇಳಲಿ. ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂತಾರೆ. ಗುತ್ತಿಗೆದಾರರು ದೂರು ಕೊಟ್ರೂ ತನಿಖೆ ಮಾಡ್ತಿಲ್ಲವೇಕೆ? ನಮ್ಮ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರ ಇರಲಿಲ್ಲ. ಹಾಗಾಗಿ ಈ ಎಲ್ಲಾ ಕೇಸ್ ಸಿಬಿಐಗೆ ಕೊಟ್ಟಿದ್ದೆವು ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ