ಬೆಂಗಳೂರು : ಮುಸ್ಲಿಂ ಪ್ರಾಬಲ್ಯವಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
2022ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈ ಸಾರಿ ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತರಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಿಯಂಕಾ ಗಾಂಧಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ತಮ್ಮ ಸಾಮರ್ಥ್ಯವನ್ನು ಒಂದು ಮಟ್ಟಕ್ಕೆ ತೋರಿಸಿರುವ ಪ್ರಿಯಂಕಾ, ಕಳೆದ ಒಂದೆರಡು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದಾರೆ. ಹಲವು ಘಟನೆಗಳು ಇವರಿಗೆ ಜನರ ಬಳಿ ತೆರಳಲು ಸಹಕಾರ ಮಾಡಿಕೊಟ್ಟಿವೆ. ಹಥ್ರಾಸ್ ಅತ್ಯಾಚಾರ, ಲಖೀಂಪುರ ಖೇರಿ ಅಪಘಾತದಲ್ಲಿ ರೈತರ ಸಾವು ಪ್ರಕರಣಗಳ ವಿರುದ್ಧದ ಹೋರಾಟ ಸಾಕಷ್ಟು ದೊಡ್ಡ ಪರಿಣಾಮ ಬೀರಿದೆ. ಉತ್ತರಪ್ರದೇಶ ಸರ್ಕಾರ ಮಾತ್ರವಲ್ಲ ಕೇಂದ್ರದ ಎನ್ಡಿಎ ಸರ್ಕಾರಕ್ಕೂ ಮುಂದೆ ಉತ್ತರಪ್ರದೇಶ ಕೈತಪ್ಪುವ ಆತಂಕ ಎದುರಾಗಿದೆ.
ರಾಮಮಂದಿರ ತೀರ್ಪು ಸಹ ಬಿಜೆಪಿಗೆ ವರವಾಗಿ ಲಭಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ದಿನದಿಂದ ದಿನಕ್ಕೆ ಪ್ರಿಯಂಕಾ ಗಾಂಧಿ ವರ್ಚಸ್ಸು ವೃದ್ಧಿಸುತ್ತಿದೆ. ಇದೀಗ ಇವರ ಕೈ ಬಲಪಡಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಎಸೆದ ದಾಳ ಕೆಲಸ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇತ್ತೀಚೆಗೆ ದಿಲ್ಲಿಗೆ ತೆರಳಿದ್ದ ಸಿದ್ದರಾಮಯ್ಯ ಪ್ರಿಯಂಕಾಗಾಂಧಿ ಅವರನ್ನು ಭೇಟಿಯಾಗಿ ಮಾಜಿ ಸಚಿವ ಜಮೀರ್ ಅಹ್ಮದ್ರನ್ನು ಉತ್ತರಪ್ರದೇಶ ಚುನಾವಣೆ ಪ್ರಚಾರ ಅಖಾಡದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆರ್ಥಿಕವಾಗಿಯೂ ಪ್ರಬಲವಾಗಿರುವ ಜಮೀರ್, ಅಲ್ಲಿನ ಮುಸ್ಲಿಂ ಮತದಾರರನ್ನು ಓಲೈಸುವಲ್ಲಿ ತಮ್ಮದೇ ತಂತ್ರಗಾರಿಕೆ ಮೂಲಕ ಸಫಲವಾಗಲಿದ್ದಾರೆ.
ನಿಮಗೆ ಯಾವುದೇ ಸಂಶಯ ಬೇಡ. ನಿಮ್ಮ ತಂತ್ರಗಾರಿಕೆ ನೀವು ಮುಂದುವರಿಸಿ, ಅದಕ್ಕೆ ಪೂರಕವಾಗಿ ಜಮೀರ್ ಕಾರ್ಯ ನಿರ್ವಹಿಸುತ್ತಾರೆ. ಇಂತಹ ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಮುಂದಿನ ಚುನಾವಣೆ ವೇಳೆ ಇದ್ದರೆ ಅನುಕೂಲ ಸಾಕಷ್ಟಿರಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಿಂದ ದಿಲ್ಲಿಗೆ ಬಂದ ನಂತರ ಜಮೀರ್ ಭೇಟಿಯಾಗುವುದಾಗಿ ಪ್ರಿಯಂಕಾ ತಿಳಿಸಿದ್ದಾರೆ.
ಈ ಹಿನ್ನೆಲೆ ಜಮೀರ್ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಒಂದೆರಡು ದಿನದಲ್ಲಿ ಸಿಹಿ ಸುದ್ದಿಯೊಂದಿಗೆ ಹಿಂದಿರುಗಲಿದ್ದಾರೆ ಎಂಬ ಮಾಹಿತಿ ಇದೆ. ಒಂದೊಮ್ಮೆ ಉತ್ತರಪ್ರದೇಶ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೊಟ್ಟ ದಾಳ ಕೆಲಸ ಮಾಡಿದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆಲ್ಲುವುದರ ಜೊತೆಗೆ ಜಮೀರ್ ಅಹ್ಮದ್ಗೆ ಇನ್ನೊಂದು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವುದು ಸಿದ್ದರಾಮಯ್ಯ ಗೇಮ್ ಪ್ಲ್ಯಾನ್ ಆಗಿದೆ.
ಇದಕ್ಕಾಗಿ ತುಮಕೂರು ನಗರ, ಬೆಂಗಳೂರಿನ ಪುಲಕೇಶಿನಗರ ಸೇರಿ ಹಲವು ಕ್ಷೇತ್ರಗಳನ್ನು ಜಮೀರ್ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಗತ್ಯ ಬಿದ್ದರೆ ಆರ್.ವಿ. ದೇವರಾಜ್ ಮನವೊಲಿಸಿ, ಚಿಕ್ಕಪೇಟೆ ಕ್ಷೇತ್ರದಿಂದಲೂ ಕಣಕ್ಕಿಳಿಸುವ ಇರಾದೆ ಇದೆ ಎನ್ನಲಾಗುತ್ತಿದೆ.
ನಾಳೆ ಪ್ರಿಯಾಂಕಾ-ಜಮೀರ್ ಭೇಟಿ : ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಚಾರ ಮಾಡುವ ವಿಚಾರವಾಗಿ ನಾಳೆ ಪ್ರಿಯಾಂಕಾ ಗಾಂಧಿ ಭೇಟಿ ಮಾಡಲಿರುವ ಜಮೀರ್ ಚರ್ಚೆ ನಡೆಸಲಿದ್ದಾರೆ. ಯುಪಿ ಚುನಾವಣೆಯಲ್ಲಿ ಮುಸ್ಲಿಂ ಮತ ಸೆಳೆಯಲು ಚುನಾವಣಾ ಪ್ರಚಾರ ಮಾಡಲು ಆಸಕ್ತಿ ಹೊಂದಿರುವ ಜಮೀರ್ ಇದರಲ್ಲಿ ಯಶಸ್ಸು ಕಾಣುವಲ್ಲಿ ಸಂಶಯವಿಲ್ಲ. ಅಲ್ಲಿ ಓವೈಸಿ ವಿರುದ್ಧ ಪ್ರಚಾರಕ್ಕೆ ಜಮೀರ್ ಅವರನ್ನ ಬಳಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ನಾಳೆ ಈ ವಿಚಾರವಾಗಿ ಅಂತಿಮ ಹಂತದ ಚರ್ಚೆ ಸಹ ನಡೆಯಲಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ : ಸಿಡಿಲು ಬಡಿದು ತಂದೆ ಸಾವು, ಮಗನಿಗೆ ಗಂಭೀರ ಗಾಯ