ಬೆಂಗಳೂರು: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ನಾವು ದೂರು ಸಲ್ಲಿಕೆ ಮಾಡಿದ್ದು, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆರಳಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದರು
ಖಾಸಗಿ ಸಂಸ್ಥೆ ಮೂಲಕ ಸರ್ಕಾರ ಸಂಗ್ರಹಿಸಿರುವ ಮತದಾರರ ಖಾಸಗಿ ಮಾಹಿತಿಯನ್ನು ಕೂಡಲೇ ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳಬೇಕು. ಈಗ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ ಮಾಹಿತಿ ಸಂಗ್ರಹವನ್ನು ನಿಲ್ಲಿಸಿ ಹೊಸದಾಗಿ ಸರ್ಕಾರದ ಮೂಲಕವೇ ಮತದಾರರ ಮಾಹಿತಿ ಮರು ಸಂಗ್ರಹ ಮಾಡಬೇಕು. ಈ ಕುರಿತು ಬಿಬಿಎಂಪಿ ಕಮಿಷನರ್ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಪ್ರಕರಣದ ತೀವ್ರತೆ ಗಂಭೀರವಾಗಿದ್ದರೂ ಸಿಎಂ ಲಘುವಾಗಿ ಮಾತನ್ನಾಡುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಏನು ಅಕ್ರಮವಾಗಿಲ್ವಾ, ಅವರು ಮಾಡಿರಲಿಲ್ವಾ. ಇವರು ಮಾಡಿರಲಿಲ್ವಾ ಎಂದು ಬೆರಳು ತೋರಿಸುವ ರೋಗ ಬಂದುಬಿಟ್ಟಿದೆ ಅವರಿಗೆ ಎಂದು ಟೀಕಿಸಿದರು.
ನಾವು ದೂರು ಕೊಟ್ಟಿದ್ದೀವಿ ಅಂತ ಬಿಜೆಪಿಯವರೂ ದೂರು ಕೊಟ್ಟಿದ್ದಾರೆ. ಇದಕ್ಕೆ ಅರ್ಥ ಇದೆಯಾ? ಎಂದು ಪ್ರಶ್ನಿಸಿದ ಅವರು, ಇವರಿಂದ ನ್ಯಾಯ ಸಮ್ಮತ ಚುನಾವಣೆ ನಡೆಯುತ್ತದೆಯಾ? ಇವರು ಹೀಗೆ ಮಾಡಿದರೆ ಆತಂಕ ಆಗುವುದಿಲ್ವಾ? ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಯಬೇಕಾದರೆ ಸರಿಯಾದ ತನಿಖೆ ಆಗಬೇಕು. ಚುನಾವಣಾ ಆಯೋಗದವರು ಮತದಾರ ಪಟ್ಟಿ ಪುನರ್ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಇದನ್ನೂ ಓದಿ: ಹಿಂದೂಗಳ ಹಿತದೃಷ್ಟಿಯಿಂದ ಪಕ್ಷೇತರನಾಗಿ ಚುನಾವಣೆಗೆ ಸಿದ್ಧ: ಪ್ರಮೋದ್ ಮುತಾಲಿಕ್