ಬೆಂಗಳೂರು : ಕಾಂಗ್ರೆಸ್ ನಿಂದ ಕೋಮು ಸೌಹಾರ್ದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗಿಲ್ಲ. ಸರ್ದಾರ್ ವಲ್ಲಭಭಾಯ್ ಪಟೇಲ್ ಬಿಟ್ಟರೆ ದೇಶ ಕಂಡ ಸಮರ್ಥ ಗೃಹ ಸಚಿವರು ಎಂದರೆ ಅದು ಅಮಿತ್ ಶಾ. ನಮ್ಮ ಗೃಹ ಸಚಿವರ ಪ್ರಚಾರ ವೈಖರಿಯಿಂದ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಅಮಿತ್ ಶಾ ಪ್ರಚಾರಕ್ಕೆ ಕಡಿವಾಣ ಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರಿಂದ ತನ್ನ ಸೋಲು ಖಚಿತ ಎಂದು ಚುನಾವಣೆಗೆ ಮೊದಲೇ ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ನಿಂದ ಕೋಮು ಸೌಹಾರ್ದದ ಪಾಠ ಕಲಿಯುವ ಅಗತ್ಯ ಇಲ್ಲ : ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ ಪ್ರಚಾರಕ್ಕೆ ಬರಬಾರದು ಎಂದು ಕಾಂಗ್ರೆಸ್ ನೀಡಿರುವ ದೂರಿನ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಕೋಮು ಗಲಭೆ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಎಲ್ಲ ಸ್ಥಗಿತವಾಗಿದೆ. ಈ ದೇಶದಲ್ಲಿ ನಡೆಯುತ್ತಿದ್ದ ಕೋಮು ಗಲಭೆ, ಭಯೋತ್ಪಾದನೆ ಕೃತ್ಯ ತಡೆದಿದ್ದು ಅಮಿತ್ ಶಾ. ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಸಮರ್ಥ ಗೃಹಮಂತ್ರಿ ಅಮಿತ್ ಶಾ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಕಾಂಗ್ರೆಸ್ ನಿಂದ ಕೋಮು ಸೌಹಾರ್ದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಕೋಮುಗಲಭೆ ನಡೆದಿತ್ತು. ಪಿಎಫ್ಐ ಗೆ ಕುಮ್ಮಕ್ಕು ಕೊಟ್ಟವರು ಯಾರು? ಕೊಲೆಗಡುಗರನ್ನು ಜೈಲಿಂದ ಬಿಡುಗಡೆ ಮಾಡಿದ್ದು ಯಾರು? ಅದಕ್ಕಾಗಿ ಕೋಮುಗಲಭೆ ಆಯಿತು. ಟಿಪ್ಪು ಜಯಂತಿ ಮೂಲಕ ಕೋಮು ಗಲಭೆ, ಜಾತಿ ಜಾತಿ ಮಧ್ಯೆ ಗಲಾಟೆ ಆಯಿತು. ಅಮಿತ್ ಶಾ ಪ್ರಚಾರಕ್ಕೆ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ಕಾಂಗ್ರೆಸ್‌ಗೆ ತನ್ನ ಸೋಲು ಖಚಿತ ಅನ್ನೋದು ಸ್ಪಷ್ಟವಾಗಿದೆ. ಹಾಗಾಗಿ ಈ ರೀತಿಯ ದೂರು ನೀಡಿದೆ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.
ಶೆಟ್ಟರ್ ವಿರುದ್ಧ ಕರಂದ್ಲಾಜೆ ವಾಗ್ದಾಳಿ : ಬಿ ಎಲ್ ಸಂತೋಷ್ ಬಗ್ಗೆ ಮಾತಾಡಿದ್ದಕ್ಕೆ ನಾನು ಟಾರ್ಗೆಟ್ ಆಗಿದ್ದೇನೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಯಾವತ್ತಿಗೂ ಜಾತಿ ಮೇಲೆ ರಾಜಕಾರಣ ಮಾಡಿದವರಲ್ಲ. ನೇರ ನೇರಾ ರಾಜಕಾರಣ ಮಾಡಿದವರು. ಜಗದೀಶ್ ಶೆಟ್ಟರ್ಗೆ ಬಿಜೆಪಿ ಪಕ್ಷ ಬಿಟ್ಟು ಹೋದ ಮೇಲೆ ಜಾತಿ, ಟೋಪಿ ಮೇಲೆ ಪ್ರೀತಿ ಬಂದಿದೆ. ಕಾಂಗ್ರೆಸ್ ಗೆ ಹೋದ ತಕ್ಷಣ ಅವರಿಗೆ ಎಲ್ಲವೂ ನೆನಪು ಆಗುತ್ತದೆ. ಶೆಟ್ಟರ್ ಅವರು ಯಾವುದೋ ಒಂದು ಜಾತಿಯಿಂದ ಗೆದ್ದಿಲ್ಲ. ಎಲ್ಲ ಜಾತಿಗಳಿಂದಲೇ ಅವರು ಗೆದ್ದಿರೋದು. ಅವರಿಗೆ ಪಕ್ಷ ಬಿಟ್ಟಾಗ ಜಾತಿ ನೆನಪು ಆಗುತ್ತದೆ. ಕಾಂಗ್ರೆಸ್‌ಗೆ ಹೋದರೆ ಜಾತಿ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ 29ರಿಂದ ಮೋದಿ ಚುನಾವಣಾ ಪ್ರವಾಸ : ಪ್ರಧಾನಿ ನರೇಂದ್ರ ಮೋದಿಯವರು ಇದೇ ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಯವರು ಏ.29ರಂದು ಬೆಳಗ್ಗೆ 9 ಗಂಟೆಗೆ ಬೀದರ್ ಜಿಲ್ಲೆ ಹುಮ್ನಾಬಾದ್‍ನಲ್ಲಿ, ಮಧ್ಯಾಹ್ನ 1 ಗಂಟೆಗೆ ವಿಜಯಪುರದಲ್ಲಿ, 3ಕ್ಕೆ ಬೆಳಗಾವಿ ಜಿಲ್ಲೆ ಕುಡುಚಿಯಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಸಂಜೆ ಬೆಂಗಳೂರಿನಲ್ಲಿ ಮಾಗಡಿ ರಸ್ತೆಯ ನೈಸ್ ರೋಡ್‍ನಿಂದ ಸುಮನಹಳ್ಳಿವರೆಗೆ ಸುಮಾರು 4.5 ಕಿ.ಮೀ ದೂರ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋಗೆ ಸುಮಾರು 450 ಬ್ಲಾಕ್‍ಗಳನ್ನು ಸಂಯೋಜಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಏ.30ರಂದು ಪ್ರಧಾನಿಯವರು ಬೆಳಿಗ್ಗೆ 11.30ಕ್ಕೆ 12.30ವರೆಗೆ ಕೋಲಾರದಲ್ಲಿ, ಸಂಜೆ 4 ಗಂಟೆಗೆ ಹಾಸನ ಜಿಲ್ಲೆ ಬೇಲೂರಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಮೈಸೂರಿನಲ್ಲಿ ಜೆ.ಎಸ್.ಎಸ್ ವಿದ್ಯಾಪೀಠ ವೃತ್ತದಿಂದ ಬನ್ನಿಮಂಟಪ ವೃತ್ತದವರೆಗೆ ಸುಮಾರು 5 ಕಿ.ಮೀ. ದೂರ ರೋಡ್ ಶೋ ನಡೆಸಲಿದ್ದಾರೆ.
ನರೇಂದ್ರ ಮೋದಿಯವರು ಇಂದು ರಾಜ್ಯದ 67ಲಕ್ಷ ಕಾರ್ಯಕರ್ತರೊಂದಿಗೆ ವರ್ಚುಯಲ್ ಮೂಲಕ ನೇರ ಸಂವಾದ ನಡೆಸಿ ಕಾರ್ಯಕರ್ತರಲ್ಲಿ ಹುರುಪು, ಉತ್ಸಾಹ ತುಂಬಿ ಪ್ರೇರಣೆ ನೀಡಿದ್ದಾರೆ. ರಾಜ್ಯದ 58,112 ಬೂತ್‍ಗಳಲ್ಲಿ, 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು. ಬೂತ್ ಮತ್ತು ಹೋಬಳಿ ಮಟ್ಟದಲ್ಲಿ ಟಿ.ವಿಗಳ ಮೂಲಕ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಎಲ್‍ಇಡಿ ಸ್ಕ್ರೀನ್ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಿದ್ದಾರೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿ ಬೃಹತ್ ಪ್ರಮಾಣದಲ್ಲಿ ನೇರ ಸಂವಾದ ಕಾರ್ಯಕ್ರಮ ನಡೆದು ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳನ್ನು ಜನರು ನಂಬುವುದಿಲ್ಲ. ಕಾಂಗ್ರೆಸ್‍ನ ಯಾವುದೇ ಗ್ಯಾರಂಟಿಗೆ ವಾರಂಟಿ ಇಲ್ಲ. ಸುಳ್ಳು ಪ್ರಚಾರಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಕೋಮು ಗಲಭೆಗಳು ನಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಕೋಮು ಗಲಭೆಗಳು, ಬಾಂಬ್ ಸ್ಫೋಟಗಳು ನಡೆದಿವೆ ಎಂದು ಹೇಳಿದರು.
ಏ.30 ರಂದು ಪ್ರಧಾನಿ ನರೇಂದ್ರಮೋದಿಯವರ ಮನ್-ಕಿ-ಬಾತ್ ನ 100ನೇ ಆವೃತ್ತಿಯನ್ನು ವೀಕ್ಷಿಸಲು ದೇಶದ 2 ಲಕ್ಷ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯದ 12 ಶಕ್ತಿಕೇಂದ್ರಗಳಲ್ಲಿ ಈ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮವನ್ನು ವಿಶ್ವದಾಖಲೆ ಮಾಡುವ ಯೋಜನೆಯನ್ನು ಬಿಜೆಪಿ ಹೊಂದಿದ್ದು, ದೇಶಾದ್ಯಂತ ಇದನ್ನು ಹಬ್ಬವನ್ನಾಗಿ ಆಚರಿಸಲಾಗುವುದು ಎಂದರು.
ಇದನ್ನೂ ಓದಿ : ರಾಷ್ಟ್ರ ಮಟ್ಟದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ತೆಲಗಾಂಣ, ಪ.ಬಂಗಾಳದ ಮುಖ್ಯಮಂತ್ರಿ ಜೊತೆ ಮಾತುಕತೆ: ಹೆಚ್.ಡಿ.ದೇವೇಗೌಡ