ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೇಗೂರು ಕೆರೆಯ ಮಧ್ಯೆ ನಿರ್ಮಾಣವಾಗಿರುವ ದ್ವೀಪ ಪ್ರದೇಶ ಹಾಗೂ ಅದರಲ್ಲಿ ನಿರ್ಮಾಣ ಮಾಡಿರುವ ಶಿವ ದೇವರ ವಿಗ್ರಹ ಈಗ ವಿವಾದಕ್ಕೆ ಗುರಿಯಾಗಿದೆ.
ಕೆರೆಯ ಆವರಣದಲ್ಲಿಯೇ ಶಿವನ ದೇವಾಲಯ ಇರುವುದರಿಂದ ಸ್ಥಳೀಯರು ಸೇರಿ, ಬಿಬಿಎಂಪಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಶಿವನ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಆದರೆ, ಕೆರೆ ಜಾಗ ಒತ್ತುವರಿ ಮಾಡುವುದು ಹಾಗೂ ಕೆರೆಯ ಮಧ್ಯೆ ನಿರ್ಮಾಣ ಕಾರ್ಯಗಳನ್ನು ಮಾಡುವುದು ಕಾನೂನು ಬಾಹಿರವಾಗಿದೆ.
ಪರಿಸರ ಹೋರಾಟಗಾರರು ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟೇ ಅಲ್ಲ, ಇದಕ್ಕೆ ಹೈಕೋರ್ಟ್ನಿಂದ ಸ್ಟೇ ತಂದಿದ್ದರು. ಈ ಪೈಕಿ ಹಲವಾರು ಕೆರೆಗಳ ರಕ್ಷಣೆಗೆ ಹೋರಾಟ ನಡೆಸಿಕೊಂಡು ಬಂದಿರುವ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ನ ಲಿಯೋ ಸಾಲ್ಡಾನಾ ಕೂಡ ಒಬ್ಬರು.
ಇದರಿಂದ ಆಕ್ರೋಶಗೊಂಡಿರುವ ಹಿಂದೂ ಕಾರ್ಯಕರ್ತರ ತಂಡ, ಶಿವನ ವಿಗ್ರಹಕ್ಕೆ ಟಾರ್ಪಲ್ನಿಂದ ಮುಚ್ಚಬಾರದು ಎಂದು ವಾರದ ಹಿಂದೆ ರಾತ್ರೋರಾತ್ರಿ ಹೋಗಿ ಟಾರ್ಪಲ್ ತೆಗೆದು ವಿಗ್ರಹ ಅನಾವರಣಗೊಳಿಸಿದ್ದರು.
ನಂತರ ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ನಲ್ಲಿ ಪ್ರಕರಣ ಇರುವ ಹಿನ್ನೆಲೆ, ಮತ್ತೆ ಟಾರ್ಪಲ್ ಮುಚ್ಚಿ ಪೊಲೀಸರನ್ನು ನೇಮಕ ಮಾಡಿತ್ತು. ಆದರೆ, ಇಂದು ಮತ್ತೆ ಹಿಂದೂ ಕಾರ್ಯಕರ್ತರ ತಂಡವೊಂದು ಕೆರೆಯ ನಡುವೆ ಇರುವ ವಿಗ್ರಹದ ಬಳಿ ಹೋಗಿ ಟಾರ್ಪಲ್ ತೆರೆದಿದ್ದಾರೆ.
ಕೋರ್ಟ್ ಆದೇಶ ಉಲ್ಲಂಘಿಸಿ ಹೋರಾಟ : ಈ ಬಗ್ಗೆ ಮಾತನಾಡಿರುವ ಹೋರಾಟಗಾರರಾದ ವಿನಯ್ ಶ್ರೀನಿವಾಸ್, ಪ್ರಕರಣ ಹೈಕೋರ್ಟ್ನಲ್ಲಿದ್ದರೂ ಕಾನೂನು ಉಲ್ಲಂಘಿಸಿ, ಶಿವನ ವಿಗ್ರಹ ಅನಾವರಣಗೊಳಿಸಿದ್ದಾರೆ. ಅಲ್ಲದೇ ಪ್ರಕರಣವನ್ನು ಕೋಮು ವಿಚಾರಕ್ಕೆ ತಿರುಚುವಂತೆ ಮಾಡಿದ್ದಾರೆ. ಎಲ್ಲ ಕಡೆ ಪೋಸ್ಟ್, ಫೇಸ್ ಬುಕ್ ಲೈವ್ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರಿಸಿದರು. ಆದರೆ, ಕೋರ್ಟ್ ಕೆರೆ ರಕ್ಷಣೆ ಪರವಾಗಿಯೇ ಇದ್ದು, ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದೆ ಎಂದರು.
ಫೇಸ್‌ಬುಕ್ ಲೈವ್ : ಇನ್ನು, ಫೇಸ್‌ಬುಕ್ ಲೈವ್ ಹಾಗೂ ವಿಡಿಯೋ ಮಾಡಿರುವ ಕಾರ್ಯಕರ್ತರ ಗುಂಪಿನ ಸದಸ್ಯರು ಮಾತನಾಡಿ, ಈ ವಿಚಾರದಲ್ಲಿ ಪ್ರಕರಣ ದಾಖಲಿಸಿದರೂ ಹೆದರೋದಿಲ್ಲ. ಬಂಧನ ಮಾಡಿದ್ರೂ ಹೆದರೋದಿಲ್ಲ. ವಿಗ್ರಹದ ಟಾರ್ಪಲ್ ತೆರೆದೇ ಇಡಬೇಕು ಎಂದಿದ್ದಾರೆ. ಶಿವನನ್ನು ಮುಚ್ಚಿಡುವ ಕೆಲಸ ಬಿಬಿಎಂಪಿ ಮಾಡಿ, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಕೆಲಸಕ್ಕೆ ಮಾತ್ರ ಸ್ಟೇ ಇದೆ : ಟಾರ್ಪಲ್ ತೆಗೆಯಬಾರದು ಎಂದು ಇಲ್ಲ. ಶಿವನ ಮೂರ್ತಿಯನ್ನು ಮುಚ್ಚಬಾರದು. ಇದು ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ. ಪ್ರತಿಷ್ಠಾಪನೆ ಆದ ಮೇಲೆ ವಿಗ್ರಹ ಮುಚ್ಚಿಡುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಇಂದು ಮತ್ತೆ ವಿಗ್ರಹ ಅನಾವರಣಗೊಳಿಸಲಾಗಿದೆ.
ಈ ಬಗ್ಗೆ ಪಾಲಿಕೆ ಕೆರೆ ವಿಭಾಗದ ಚೀಫ್ ಇಂಜಿನಿಯರ್ ಮೋಹನ್ ಅವರು ಪ್ರತಿಕ್ರಿಯಿಸಿ, ಪ್ರಕರಣ ಕೋರ್ಟ್ನಲ್ಲಿರುವುದರಿಂದ ಏನೂ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.