ಬೆಂಗಳೂರು: ಪ್ರತ್ಯೇಕ ಸಭೆಯನ್ನು ನಡೆಸದಂತೆ ಬಿಜೆಪಿ ಹೈಕಮಾಂಡ್ ನೀಡಿದ್ದ ಸೂಚನೆಯನ್ನು ಧಿಕ್ಕರಿಸಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಇಂದು ಮತ್ತೆ ಪ್ರತ್ಯೇಕ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಾಸಕರ ಭವನದಲ್ಲೇ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಬಾರದಂತೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ.
ಶಾಸಕರ ಭವನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ನಿನ್ನೆ ನಡೆಸಿದ್ದ ಪ್ರತ್ಯೇಕ ಸಭೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇನ್ನು ಮುಂದೆ ಇಂತಹ ಸಭೆ ನಡೆಸದಂತೆ ಸೂಚನೆ ನೀಡಿದ್ದರು. ಸಭೆಯ ನೇತೃತ್ವ ವಹಿಸಿದ್ದ ಸುರಪುರ ಶಾಸಕ ರಾಜುಗೌಡ ಹಾಗೂ ಇನ್ನೋರ್ವ ಶಾಸಕರಿಗೆ ದೂರವಾಣಿ ಕರೆ ಮಾಡಿದ ಸಂತೋಷ್ ಸಭೆ ನಡೆಸದಂತೆ ಸೂಚನೆ ನೀಡಿ, ಪಕ್ಷದ ಚೌಕಟ್ಟು ಮೀರದಂತೆ ತಿಳಿಸಿದ್ದರು.
ಹೈಕಮಾಂಡ್ ಸೂಚನೆ ಉಲ್ಲಂಘಿಸಿ ಸಭೆ :
ಇಂದು ಬೆಳಗ್ಗೆ ಯಾವುದೇ ಸಭೆ ನಡೆಸುವ ಗೋಜಿಗೆ ಶಾಸಕರು ಹೋಗಿರಲಿಲ್ಲ. ನಂತರ ಬೇರೆ ಕಡೆ ಸಭೆ ನಡೆಸುವ ಚಿಂತನೆ ನಡೆಸಿ ಮಾಧ್ಯಮಗಳಿಂದಲೂ ದೂರ ಉಳಿದಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಶಾಸಕರ ಭವನದಲ್ಲಿಯೇ ಹೈಕಮಾಂಡ್ ಸೂಚನೆ ಉಲ್ಲಂಘಿಸಿ ಸಭೆ ನಡೆಸಿದ್ದಾರೆ.
ಶಾಸಕ ರಾಜುಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಸೇಡಂ ಶಾಸಕ ರಾಜಕುಮಾರ್ ಪಾಟೀಲ್, ಕನಕಗಿರಿ ಶಾಸಕ ಬಸವರಾಜ ದಡೇಸಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಭಾಗಿಯಾಗಿದ್ದರು.
ಸಭೆಗೆ ಮುರುಗೇಶ್ ನಿರಾಣಿ, ರೇಣುಕಾಚಾರ್ಯ ಗೈರು :
ನಿನ್ನೆಯ ಸಭೆಯಲ್ಲಿದ್ದ ಮುರುಗೇಶ್ ನಿರಾಣಿ ಮತ್ತು ರೇಣುಕಾಚಾರ್ಯ ಇಂದಿನ ಸಭೆಯಲ್ಲಿ ಇರಲಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ಸಿಗಬೇಕು. ಸಂಪುಟ ವಿಸ್ತರಣೆ ವೇಳೆ ಇಬ್ಬರಿಗೆ ಆದ್ಯತೆ ನೀಡಬೇಕು. ಈ ಕುರಿತು ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಬೇಕು ಎನ್ನುವ ನಿರ್ಣಯದೊಂದಿಗೆ ಸಭೆ ನಡೆಸಲಾಗಿತ್ತು. ಪಕ್ಷದ ವೇದಿಕೆ ಹೊರತುಪಡಿಸಿ ಇತರೆಡೆ ಸಭೆ ನಡೆಸಿದರೆ, ಪಕ್ಷ ವಿರೋಧಿ ಚಟುವಟಿಕೆಯ ಆರೋಪಕ್ಕೆ ಸಿಲುಕಬೇಕಾಗಲಿದೆ ಎನ್ನುವ ಕಾರಣಕ್ಕೆ ಶಾಸಕರ ಭವನವನ್ನೇ ಇಂದಿನ ಸಭೆಗೂ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.