ಬೆಂಗಳೂರು: ಖಾಸಗಿ ಆಸ್ಪತ್ರೆಯವರ ಮೇಲೆ ಕಣ್ಣಿಡಲು ಸದ್ಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ತಂಡವನ್ನು ಸರ್ಕಾರ ರಚನೆ ಮಾಡಿದೆ. ಈ ಕುರಿತು 'ಈಟಿವಿ ಭಾರತ'ದ ಜೊತೆ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮಾತನಾಡಿದ್ದಾರೆ.
ಸರ್ಕಾರ ನಮಗೆ ಮೂರು ಆಸ್ಪತ್ರೆಗಳ ಜವಾಬ್ದಾರಿಯನ್ನು ಕೊಟ್ಟಿದೆ. ಹೀಗಾಗಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಆಸ್ಪತ್ರೆಯವರು ಬಿಲ್ ಹೆಚ್ಚಾಗಿ ಪಡೆದಿರುವುದು ಗೊತ್ತಾಗಿತ್ತು. ಹೀಗಾಗಿ ನಾವು ಸರ್ಕಾರದ ನಿಯಮದ ಬಗ್ಗೆ ಅವರಿಗೆ ತಿಳಿ ಹೇಳಿದ್ವಿ. ಸದ್ಯ 24 ಜನರಿಗೆ ಹಣ ಕೊಡಿಸುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಹಾಗೆ ಅಡ್ವಾನ್ಸ್ ಹಣವನ್ನ ಕೂಡ ಕೊಟ್ಟಿದ್ದಾರೆ. ಒಬ್ಬೊಬ್ಬರಿಂದ ಐದರಿಂದ ಆರು ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದಾರೆ. ನಮಗೆ ಸರ್ಕಾರ ಜವಾಬ್ದಾರಿ ಕೊಟ್ಟಿದ್ದು, ಸರ್ಕಾರದ ನಿಯಮದ ಪ್ರಕಾರ ಆಸ್ಪತ್ರೆಯಲ್ಲಿ, 50% ಅಷ್ಟು ಬೆಡ್ ಇವೆ. ನಾವು ಒಂದು ಹೆಜ್ಜೆ ಮುಂದೆ ಹೋಗಿ ತಪಾಸಣೆ ಮಾಡಿದಾಗ ಅಧಿಕ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ಡಿ ರೂಪಾ ತಿಳಿಸಿದರು.
ಸದ್ಯ ನನಗೆ ಹಾಗೂ ನನ್ನ ತಂಡದ ಸದಸ್ಯರಾದ ಐಎಎಸ್ ಅಧಿಕಾರಿ ಹರ್ಷಾ ಗುಪ್ತಾ ಆವರಿಗೆ ಖುಷಿ ಇದೆ. ಸದ್ಯ ನಮ್ಮ ಹಾಗೆ ಇತರೆ ತಂಡದ ಅಧಿಕಾರಿಗಳು ಕೆಲಸ ಮಾಡಬೇಕು. ಕೊರೊನಾ ಸೋಂಕಿತರಿಗೆ ಸಹಾಯ ಮಾಡಬೇಕು. ಕೆಲ ಖಾಸಗಿ ಆಸ್ಪತ್ರೆಯವರು ನಾವು ಭೇಟಿ ನೀಡಿದಾಗ ಉಡಾಫೆ ಉತ್ತರ ನೀಡಿದ್ರು. ಆದರೆ ನಾವು ಕ್ರಿಮಿನಲ್ ಕೇಸ್ ವಿಚಾರ ತಿಳಿಸಿದಾಗ ಆಸ್ಪತ್ರೆಯವರು ಸರಿಯಾದ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ನಾವು ಈಗಾಗಲೇ ಅಲರ್ಟ್ ಆಗಿದ್ದೀವಿ. ನಮ್ಮ ತಂಡದ ಸಿಬ್ಬಂದಿ ಕೂಡ ಆ್ಯಕ್ಟಿವ್ ಇದ್ದಾರೆ. ಒಂದು ವೇಳೆ ಆಸ್ಪತ್ರೆಯವರು ನಿಯಮ ಉಲ್ಲಂಘನೆ ಮಾಡಿದರೆ, ರಾಷ್ಟ್ರೀಯ ವಿಪತ್ತು ಅಡಿಯಲ್ಲಿ ಕ್ರಮ ಕೈಗೊಳ್ತಿವಿ. ನನಗೆ ಸದ್ಯ ಮೂರು ಆಸ್ಪತ್ರೆಗಳ ಜವಾಬ್ದಾರಿ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಆಸ್ಪತ್ರೆಗಳ ಜವಾಬ್ದಾರಿ ಕೊಟ್ರೇ, ನಾನು ಪರಿಶೀಲನೆ ಮಾಡೋಕ್ಕೆ ಸಿದ್ಧ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಸ್ಪಷ್ಟಪಡಿಸಿದ್ದಾರೆ.