ಬೆಂಗಳೂರು: ರಾಜ್ಯಕ್ಕೆ ವಿದೇಶದಿಂದ ಬರುವ ಪ್ರಯಾಣಿಕರನ್ನು ಎ, ಬಿ ಮತ್ತು ಸಿ ವಿಭಾಗ ಮಾಡಿ ಮುನ್ನೆಚ್ಚರಿಕೆ ವಹಿಸಲು ತೀರ್ಮಾನಿಸಿದ್ದೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಎ ವಿಭಾಗದ ರೋಗಿಗಳು ನೇರವಾಗಿ ಕೊರೊನಾ ಪೀಡಿತರಾಗಿರುತ್ತಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ. ಬಿ ವಿಭಾಗದ ರೋಗಿಗಳಿಗೆ ಸರ್ಕಾರದ ಖರ್ಚಲ್ಲೇ ತಪಾಸಣೆ, ಪರೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಬಿ ವಿಭಾಗದ ರೋಗಿಗಳನ್ನು ಮನೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. 104, 102 ಸಂಖ್ಯೆಗೆ ಕರೆ ಮಾಡಿ ಕಾಯಿಲೆ ಮಾಹಿತಿ ಪಡೆಯಬಹುದು. ಇದು ಉಚಿತ ಕರೆಯಾಗಿರುತ್ತದೆ. ಎನ್ಸಿಸಿ, ಎನ್ಎಸ್ಎಸ್, ಮೆಡಿಕಲ್ ಕಾಲೇಜು, ನರ್ಸಿಂಗ್ ವಿದ್ಯಾರ್ಥಿ, ಎನ್ಜಿಒ, ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳಿಗೆ ಸ್ವಯಂ ಸೇವಕರಾಗಿ ಕೊರೊನಾ ಜಾಗೃತಿಗೆ ಸಹಕರಿಸುವಂತೆ ಕೋರಿದ್ದೇವೆ.
ಕಾರ್ಮಿಕ ಸ್ಥಳ, ಪ್ರಾರ್ಥನಾ ಮಂದಿರಗಳಲ್ಲಿ ಮಾ. 31ರವರೆಗೆ ವಿವಾಹ ಮತ್ತಿತರ ಸಮಾರಂಭ ನಡೆಸುವಂತಿಲ್ಲ. ಪಬ್ಗಳನ್ನು ಸಂಪೂರ್ಣ ಬಂದ್ ಮಾಡಲು ಸೂಚಿಸಿದ್ದೇವೆ. ಆದರೂ ಕೆಲವರು ನಡೆಸುತ್ತಿದ್ದಾರೆ. ಇದನ್ನೂ ಬಂದ್ ಮಾಡಿಸುತ್ತೇವೆ. ಅಗತ್ಯ ಬಿದ್ದರೆ ಪಬ್ಗಳ ಮಾಲೀಕತ್ವ ಇಲ್ಲವೇ ಪರವಾನಗಿ ರದ್ದುಪಡಿಸಲು ನಿರ್ಧರಿಸಿದ್ದೇವೆ ಎಂದರು.
ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟದ 10-12 ಜಿಲ್ಲೆಗಳನ್ನು ಸೇರಿಸಿದರೂ ಒಂದೇ ಒಂದು ಕೊರೊನಾ ಪ್ರಯೋಗಾಲಯ ಇಲ್ಲ. ಕೇವಲ ಬೆಂಗಳೂರು, ಮೈಸೂರಿಗೆ ಲ್ಯಾಬ್ ಸೀಮಿತವಾಗಿದೆ. ಉತ್ತರ ಕರ್ನಾಟಕ ಜನ ಭಯಭೀತರಾಗಿದ್ದಾರೆ. ಮಹಾರಾಷ್ಟ್ರ ಗಡಿಯಲ್ಲಿ ಲ್ಯಾಬ್ ಇಲ್ಲ ಎಂದರೆ ಹೇಗೆ? ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲ್ಯಾಬ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿ ಜಿಲ್ಲೆಗೆ ಒಂದು ಲ್ಯಾಬ್ ಇಲ್ಲವೇ ನಿಗಾ ಘಟಕ ನಿರ್ಮಿಸಿ. ವಿಳಂಬ ಮಾಡದೇ ಲ್ಯಾಬ್ ಬರಬೇಕು ಎಂದರು.
ಡಿಸಿಎಂ ಡಾ. ಅಶ್ವತ್ಥನಾರಾಯಣ್ ಮಾತನಾಡಿ, ಸಿಎಂ ಈ ಬಜೆಟ್ನಲ್ಲಿ ಪ್ರತಿ ಜಿಲ್ಲೆಗೆ ಒಂದು ಮಾಲಿಕ್ಯುಲರ್ ಲ್ಯಾಬ್ ಸ್ಥಾಪಿಸಲು ಹಣ ಮೀಸಲಿಟ್ಟಿದ್ದಾರೆ. ಇದರಿಂದ ಮುಂದಿನ ದಿನದಲ್ಲಿ ಎಲ್ಲಾ ವಿಧದ ತಪಾಸಣೆಗೆ ಅನುಕೂಲ ಆಗಲಿದೆ. ವೈದ್ಯಕೀಯ ಕಿಟ್ ಕೂಡ ಹೊರಗಿಂದ ತರಬೇಕಿತ್ತು. ಆದರೆ ಈಗ ನಮ್ಮಲ್ಲೇ ಉತ್ಪಾದಿಸುತ್ತೇವೆ. ಮುಂದೆ ಯಾವುದೇ ಸಮಸ್ಯೆ ಆಗದು ಎಂದರು.