ಬೆಂಗಳೂರು: ಸಹೋದರ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಮುಜುಗರಕ್ಕೆ ಒಳಗಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಧಾನಸಭೆಯ ಕಲಾಪದಿಂದ ದೂರವೇ ಉಳಿದರು.
ಸದನದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ತೀವ್ರ ಚರ್ಚೆ ಹಿನ್ನೆಲೆಯಲ್ಲಿ ಕಲಾಪದಲ್ಲಿ ಭಾಗಿಯಾದರೂ ತಾವು ಸಹ ಮುಜುಗರಕ್ಕೆ ಒಳಗಾಗುವ ಸ್ಥಿತಿ ಎದುರಾಗಲಿದೆ. ಅನಿವಾರ್ಯವಾಗಿ ತಮ್ಮನ್ನು ಮಾತಿಗಿಳಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೂರವೇ ಉಳಿಯಲು ಸತೀಶ್ ಜಾರಕಿಹೊಳಿ ತೀರ್ಮಾನಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸದನಕ್ಕೆ ಗೈರಾಗಿರುವ ಸತೀಶ್ ಜಾರಕಿಹೊಳಿ ತಮ್ಮ ಪಕ್ಷದ ಶಾಸಕರು ದೊಡ್ಡದಾಗಿ ಸುದ್ದಿ ಮಾಡಿರುವ ಸಿಡಿ ವಿಚಾರದ ಕುರಿತು ಏನನ್ನು ಹೇಳಲಾಗದ ಅಸಹಾಯಕ ಸ್ಥಿತಿ ಎದುರಿಸುತ್ತಿದ್ದಾರೆ. ಸದನಕ್ಕೆ ಬಂದರೆ ಪರ ಅಥವಾ ವಿರೋಧವಾಗಿ ಮಾತನಾಡಲೆಬೇಕಾದ ಅನಿವಾರ್ಯತೆ ಇದೆ. ಮುಜುಗರ ತಪ್ಪಿಸಿಕೊಳ್ಳಲು ಸದನದಿಂದಲೂ ಅವರು ದೂರ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆ. ಇದು ಅವರಿಗೆ ಅನಿವಾರ್ಯವೂ ಆಗಿದೆ.
ಸಾಮಾನ್ಯವಾಗಿ ತಮ್ಮನ್ನು ತಾವು ಬೆಳಗಾವಿಗೆ ಸೀಮಿತಗೊಳಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಪಕ್ಷದ ಕಾರ್ಯಾಧ್ಯಕ್ಷರಾಗಿಯೂ ಕೂಡ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿರಲಿಲ್ಲ. ಇದೀಗ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇವರ ಹೆಸರು ಬಹುತೇಕ ಅಂತಿಮಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆಗೆ ದಿಲ್ಲಿಗೂ ತೆರಳಿದ್ದರು.
ಓದಿ: ಚಾರಿತ್ರ್ಯದ ಚಾಲೆಂಜ್ಗೆ ಹಲವರಿಂದ ಆಕ್ಷೇಪ; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಸಚಿವ ಸುಧಾಕರ್
ಒಟ್ಟಾರೆ ಸಹೋದರನ ಸಿಡಿ ಪ್ರಕರಣದಿಂದಾಗಿ ಮುಜುಗರಕ್ಕೆ ಒಳಗಾಗಿರುವ ಸತೀಶ್ ಜಾರಕಿಹೊಳಿ ಇದೀಗ ಪಕ್ಷದ ಚಟುವಟಿಕೆಯಿಂದ ದೂರ ಉಳಿಯುವಂತಹ ಸ್ಥಿತಿ ಎದುರಾಗಿದೆ. ಒಂದೆಡೆ ಬಜೆಟ್ ಅಧಿವೇಶನದಿಂದ ದೂರವುಳಿದಿರುವ ಅವರು, ಮುಂದಿನ ದಿನಗಳಲ್ಲಿ ಬೆಳಗಾವಿ ಅಭ್ಯರ್ಥಿಯಾದರೆ ಪಕ್ಷದ ಪ್ರಚಾರ ಕಾರ್ಯದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.