ಬೆಂಗಳೂರು: ಆರ್.ವಿ.ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದು, ಇಂದು ಸಂಜೆ ನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಂತಿಮ ದರ್ಶನಕ್ಕೆ ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ಸಮೀಪವಿರುವ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಮಧ್ಯಾಹ್ನದವರೆಗೂ ಅವಕಾಶ ಕಲ್ಪಿಸಲಾಗಿದೆ.
ಪಾಂಡುರಂಗ ಶೆಟ್ಟಿ ಸಾಧನೆ: ಪಾಂಡುರಂಗಶೆಟ್ಟಿ ಅವರು 1972 ರಿಂದ 2022 ರವರೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ 1,500ಕ್ಕೂ ಹೆಚ್ಚು ಅಧ್ಯಾಪಕರು, ಸಿಬ್ಬಂದಿ ಹಾಗೂ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 24 ಸಂಸ್ಥೆಗಳಿರುವ ದೈತ್ಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್, ಡಿ.ಎ.ಪಾಂಡು ಸ್ಮಾರಕ, ಆರ್.ವಿ.ಡೆಂಟಲ್ ಕಾಲೇಜು, ಎಸ್.ಎಸ್.ಆರ್.ವಿ ಕಾಲೇಜು, ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜು, ಆರ್.ವಿ.ಆರ್ಕಿಟೆಕ್ಚರ್ ಕಾಲೇಜು, ಆರ್.ವಿ.ಕಾಲೇಜ್ ಆಫ್ ಫಿಸಿಯೋಥೆರಪಿ ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇವರಿಂದ ಸ್ಥಾಪನೆಗೊಂಡಿವೆ. ಲಕ್ಷಾಂತರ ಮಂದಿಗೆ ಶಿಕ್ಷಣ ನೀಡಿದ ಶ್ರೇಯಸ್ಸು ಪಾಂಡುರಂಗ ಶೆಟ್ಟಿ ಅವರಿಗೆ ಸಲ್ಲುತ್ತದೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮತ್ತು ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ.
ಇದನ್ನೂ ಓದಿ: ಸಿಂದಗಿ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಹೃದಯಾಘಾತದಿಂದ ನಿಧನ
ವಿವಿಧ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಇವರು ಆಹಾರದಿಂದ ಅಲ್ಯೂಮಿನಿಯಂ, ಪ್ರಯಾಣ, ಆಟೋಮೊಬೈಲ್, ಹಣಕಾಸು ಇತ್ಯಾದಿವರೆಗೆ ಹಲವು ಕಂಪನಿಗಳ ನಿರ್ದೇಶಕರು ಮತ್ತು ಅಧ್ಯಕ್ಷರಾಗಿದ್ದರು. ಪಾಂಡುರಂಗಶೆಟ್ಟಿ ವ್ಯಾಪಕವಾಗಿ ಪ್ರಯಾಣಿಸುವ ಹಾಗೂ ಮಾಹಿತಿ ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ವಿದೇಶಗಳಲ್ಲಿಯೂ ಅನೇಕ ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಿದ್ದರು. ರೋಟೇರಿಯನ್ ಮತ್ತು ರೋಟರಿ ಇಂಟರ್‌ನ್ಯಾಶನಲ್‌ನ ಹಿಂದಿನ ಅಧ್ಯಕ್ಷರೂ ಆಗಿದ್ದರು. 1991 ರಿಂದ 1993 ರ ಅವಧಿಯಲ್ಲಿ ರೋಟರಿ ಇಂಟರ್‌ನ್ಯಾಶನಲ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಎಲ್ ಟಿ ತಿಮ್ಮಪ್ಪ ಹೆಗಡೆ ನಿಧನ
ಪಾಂಡುರಂಗಶೆಟ್ಟಿ ಅವರು ಸರ್ಕಾರದ ಹಲವಾರು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಹಾಗೂ ಸಿಎಫ್ಟಿಆರ್ಐ ಮತ್ತು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಸಲಹಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಕೊಯಮತ್ತೂರಿನ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರೇಟ್ ಪದವಿ ನೀಡಿದೆ. 2009 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಸಹ ಲಭಿಸಿದೆ.
ಇಂದು ಸಂಜೆ ಅಂತ್ಯಕ್ರಿಯೆ: ಪ್ರಸ್ತುತ ಕರ್ನಾಟಕ ಅನುದಾನರಹಿತ ಖಾಸಗಿ ಕಾಲೇಜುಗಳ ನಿರ್ವಹಣೆಗಳ ಸಂಘ ಮತ್ತು ಕರ್ನಾಟಕ ಖಾಸಗಿ ಕಾಲೇಜುಗಳ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಗರದಲ್ಲಿ ನೆರವೇರಲಿದೆ ಎಂದು ಪುತ್ರ ಎಂಪಿ ಶ್ಯಾಮ್ ತಿಳಿಸಿದ್ದಾರೆ.
ಇದನ್ನೂ ಓದಿ: ರಂಗಸ್ಥಳದಲ್ಲೇ ಹೃದಯಾಘಾತ: ಕಟೀಲು ಮೇಳದ ಕಲಾವಿದ ನಿಧನ