ಬೆಂಗಳೂರು: ಆರ್ಎಸ್ಎಸ್ನ ವಾರ್ಷಿಕ ಸಮ್ಮೇಳನ ಈ ಬಾರಿ ಮಹಾರಾಷ್ಟ್ರದ ನಾಗ್ಪುರ ಬದಲು ಬೆಂಗಳೂರಿನಲ್ಲಿ ನಡೆಯಲಿದೆ. ನಾಗಪುರದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಅಧಿವೇಶನವನ್ನು ಕೋವಿಡ್ನಿಂದಾಗಿ ಬೆಂಗಳೂರು ನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರ್ಎಸ್ಎಸ್ನ ಕರ್ನಾಟಕ ದಕ್ಷಿಣ ಪ್ರಚಾರ ವಿಭಾಗ ಪ್ರಮುಖ್ ಇ.ಎಸ್ ಪ್ರದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳ 19 ಮತ್ತು 20ರಂದು ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಈ ಅಧಿವೇಶನ ನಡೆಯಲಿದೆ. ಆರ್ಎಸ್ಎಸ್ ಸರಸಂಘ ಚಾಲಕ ಡಾ. ಮೋಹನ್ ಭಾಗವತ್, ಸರ ಕಾರ್ಯವಾಹ ಭಯ್ಯಾಜಿ ಜೋಶಿ, ಹಿರಿಯರಾದ ದತ್ತಾತ್ರೇಯ ಹೊಸಬಾಳೆ, ಡಾ. ಮನಮೋಹನ ವೈದ್ಯ, ಡಾ ಕೃಷ್ಣ ಗೋಪಾಲ್ ಸಿ.ಆರ್ ಮುಕುಂದ ಸೇರಿದಂತೆ ಹಲವರು ಪ್ರಮುಖರು ಭಾಗವಹಿಸಲಿದ್ದಾರೆ.
ಇದನ್ನು ಓದಿ: ಯುಎಸ್ ಅಧ್ಯಕ್ಷರಾಗಿ ಬೈಡನ್ ಇಂದು ಪ್ರಮಾಣ: ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ!
ಸರಕಾರ್ಯವಾಹ ಆಯ್ಕೆ ನಡೆಯಲಿರುವ ಈ ಅಧಿವೇಶನದಲ್ಲಿ ದೇಶದಾದ್ಯಂತ 500 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆರ್ಎಸ್ಎಸ್ನ ಸಂಘಟನೆಯ ನೀತಿ - ನಿರೂಪಣೆಗಳ ಕುರಿತು ಈ ಎರಡು ದಿನಗಳ ಸಮ್ಮೇಳನದಲ್ಲಿ ನಿರ್ಣಯ ತಗೆದುಕೊಳ್ಳಲಾಗುತ್ತದೆ.