ಬೆಂಗಳೂರು : ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿರುವುದೇ ಈ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ. ಅದರಿಂದ ಕೊರೊನಾ ಹೋಗಲಿಲ್ಲ, ಬದಲಿಗೆ ರಾಷ್ಟ್ರದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನ ಭಾರತಿ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಇಂದು ರಾತ್ರಿ ಮಾತನಾಡಿದ ಅವರು, ಈ ಹಿಂದೆ ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಮೋದಿಯೇ ಟೀಕಿಸಿದ್ದ ವ್ಯಕ್ತಿಯನ್ನು ಬಿಜೆಪಿಯವರು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಇನ್ನು, ಉತ್ತರ ಕರ್ನಾಟಕದಲ್ಲಿ ಒಂದು ವಾರದಿಂದ ಪ್ರವಾಹ ಪರಿಸ್ಥಿತಿಯಿದ್ದರೂ ರಾಜ್ಯದ ಜೊತೆ ಪ್ರಧಾನಿ ಮೋದಿ ಚರ್ಚಿಸಿಲ್ಲ. ಆದರೆ, ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಿಎಂಗಳ ಜೊತೆ ಮಾತನಾಡಿ, ಅವರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆದರೆ, ನಮ್ಮ ರಾಜ್ಯ ಏನು ಮಾಡಿತ್ತು. ಆದ್ದರಿಂದ ರಾಷ್ಟ್ರೀಯ ಪಕ್ಷಗಳ ವ್ಯಾಮೋಹ ಬಿಟ್ಟುಬಿಡಿ. ರಾಜ್ಯದ ಗೌರವ ಕಾಪಾಡುವ ಜೆಡಿಎಸ್ ಮೇಲೆ ನಂಬಿಕೆಯಿಡಿ ಎಂದು ಮತದಾರರಿಗೆ ಹೇಳಿದರು.
ಬೆಂಗಳೂರಿಗೆ ಜೆಡಿಎಸ್ ಬಹಳ ದೊಡ್ಡ ಕೊಡುಗೆ ನೀಡಿದೆ. ಕೊರೊನಾ ಸಮಯದಲ್ಲಿ ಸರ್ಕಾರ ಯಾರಿಗೆ ನೆರವಾಗಿದೆ. ಸರ್ಕಾರ ಘೋಷಿಸಿದ ಕೊರೊನಾ ಪ್ಯಾಕೇಜ್ ಎಷ್ಟು ಜನಕ್ಕೆ ತಲುಪಿದೆ. ಕೊರೊನಾ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೆ 50 ಲಕ್ಷ ಕುಟುಂಬಗಳಿಗೆ 10 ಸಾವಿರ ರೂ. ನೀಡುತ್ತಿದ್ದೆ ಎಂದು ಹೇಳಿದರು.
ಸತ್ವ ಪರೀಕ್ಷೆ : ಈ ಉಪಚುನಾವಣೆ ನನಗೂ ಸತ್ವಪರೀಕ್ಷೆ ಇದ್ದಂತೆ, ಪ್ರಾಮಾಣಿಕ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದೇವೆ. ಮುನಿರತ್ನ ಕೆಲಸವೇ ಮಾಡದೇ 250 ಕೋಟಿ ರೂ. ಲೂಟಿ ಮಾಡಿದ್ದಾರೆ. ಪಾಪದ ದುಡ್ಡಿನಿಂದ ಆಹಾರ ಕಿಟ್ ನೀಡಿದ್ದಾರೆ. ಅವರೇನು ತಮ್ಮ ಜೇಬಿನಿಂದ ನಿಮಗೆ ಫುಡ್ ಕಿಟ್ ಕೊಟ್ಟಿಲ್ಲ, ನಿಮ್ಮ ದುಡ್ಡು ಲೂಟಿ ಮಾಡಿ ಕೊಟ್ಟಿದ್ದಾರೆ ಎಂದು ಮುನಿರತ್ನ ವಿರುದ್ಧ ಹೆಚ್ ಡಿಕೆ ಕಿಡಿಕಾರಿದರು. ಅಭ್ಯರ್ಥಿ ಕೃಷ್ಣಮೂರ್ತಿ ಇಂದು ಕಣ್ಣೀರು ಹಾಕಿದ್ದಾರೆ. ತನ್ನ ಹೃದಯದ ನೋವನ್ನು ಭಾವನಾತ್ಮಕವಾಗಿ ಹೇಳಿದ್ದಾರೆ. ಕೃಷ್ಣಮೂರ್ತಿ ಎಂಎಲ್ಎ ಚುನಾವಣೆಗೆ ನಿಲ್ಲಬೇಕೆಂಬ ಕನಸಿರಲಿಲ್ಲ. ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇತ್ತು. ನಾವೀಗ ಎಂಎಲ್ಎ ಅಭ್ಯರ್ಥಿ ಮಾಡಿದ್ದೇವೆ ಎಂದರು.
ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ: ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ, ನಾನು ಖಂಡಿತ ಹರಕೆ ಕುರಿಯಲ್ಲ ಎಂದು ಭಾವುಕರಾದರು. ನನ್ನನ್ನು ಹರಕೆ ಕುರಿ ಎಂದು ಕರೆಯುತ್ತಿದ್ದಾರೆ. ನಾನು ದುಡ್ಡು ತೆಗೆದುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ. ನನಗೆ ಏನು ಬೇಕಾದರೂ ಹೇಳಲಿ. ಆದರೆ, ಕುಮಾರಸ್ವಾಮಿ ಅವರ ಬಗ್ಗೆ ಏನೂ ಹೇಳಬೇಡಿ. ನಿಷ್ಠಾವಂತ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ತಮ್ಮ ಭಾಷಣ ಉದ್ದಕ್ಕೂ ಕಣ್ಣೀರಿಟ್ಟರು.
ಹಿತ್ತಲಗಿಡ ಮದ್ದಲ್ಲ ಎಂಬ ಗಾದೆ ಮಾತಿದೆ. ಹೊರಗಿನವರಿಗೆ ಮಣೆ ಹಾಕಿ ಸ್ಥಳೀಯರನ್ನು ಮರೆತು ಬಿಡ್ತಾರೆ. ಒಬ್ಬರು ಬೆಳೆಯುತ್ತಾರೆ. ಅಂದರೆ ತುಳಿಯುತ್ತಾರೆ. ನಾನು ಖಂಡಿತ ಹರಕೆ ಕುರಿ ಅಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.