ಬೆಂಗಳೂರು: ದೇವರ ಜೀವನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಮಜರ್ಖಾನ್ ಕೊಲೆ ಪ್ರಕರಣ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರು ಸೇರಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಹಬಾಜ್, ಶಕೀಬ್, ಅಲೀಂ, ಫೈರೋಜ್, ರೇಷ್ಮಾ, ಸಮೀನಾ ಹಾಗೂ ಹಸೀನಾ ಬಂಧಿತರು. ಡಿ.ಜಿ.ಹಳ್ಳಿಯ ಶಿವರಾಜ್ ರಸ್ತೆಯಲ್ಲಿ ವಾಸವಾಗಿದ್ದ ಮೃತ ಮಜರ್ ಖಾನ್ ಅಲಿಯಾಸ್ ಭಟ್ಟಿ ಮಜರ್ ಹಾಗೂ ಆರೋಪಿಗಳೆಲ್ಲರೂ ಪರಸ್ಪರ ಸ್ನೇಹಿತರಾಗಿದ್ದರಂತೆ. ಇದರ ಜೊತೆಗೆ, ಆರೋಪಿಗಳೆಲ್ಲರೂ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದರು.
ಘಟನೆಯ ಹಿನ್ನೆಲೆ: 2ನೇ ಮದುವೆಯಾಗಿದ್ದ ಮಜರ್ಗೆ ಮೊದಲೇ ಹೆಂಡತಿಯೊಂದಿಗೆ ಏಳು ಮಕ್ಕಳಿದ್ದರೆ, 2ನೇ ಪತ್ನಿಗೆ ಒಂದು ಮಗುವಿತ್ತು. ಮದ್ಯ ಸೇವಿಸಿದ ನಶೆಯಲ್ಲಿ ಮನೆಯಲ್ಲಿ ಹೆಂಡತಿಯೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಆತ ಜಗಳ ಮಾಡುತ್ತಿದ್ದನಂತೆ. ಇದರಿಂದ ನೊಂದು ಅದೇ ಪ್ರದೇಶದಲ್ಲಿ ವಾಸವಾಗಿದ್ದ ಮೊಹಮ್ಮದ್ ಶಾಬಾಜ್ ಸ್ನೇಹಿತ ಸಾಕೀಬ್ ಬಂಗಾರ್ ಜೊತೆ 2017ರಲ್ಲಿ ಆಕೆ ಓಡಿ ಹೋಗಿದ್ದಳು.
ಇದಕ್ಕೆ ಆರೋಪಿ ಶಹಬಾಜ್ ಸಹಕಾರ ನೀಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಆಗಾಗ ಕುಡಿದು ಬಂದು ಮನೆ ಬಳಿ ಆರೋಪಿಗಳೊಂದಿಗೆ ಮಜರ್ ಗಲಾಟೆ ಮಾಡುತ್ತಿದ್ದ. ನಿನ್ನೆ ಬೆಳಗ್ಗೆಯೂ ಸಹ ಆರೋಪಿಗಳ ಮನೆ ಮುಂದೆ ಹೋಗಿ ಮಜರ್ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿಗಳು ಮನೆ ಮುಂದೆ ಚಾಕುವಿನಿಂದ ತಿವಿದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಡಿ.ಜೆ ಹಳ್ಳಿ ಇನ್ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ : ಸಚಿವ ಕೆ ಎಸ್ ಈಶ್ವರಪ್ಪ