ಬೆಂಗಳೂರು: ನಗರದ ಡಿ ಜೆ ಹಳ್ಳಿಯಲ್ಲಿ ನೆತ್ತರು ಹರಿದಿದೆ. ಬೆಳ್ಳಂಬೆಳಗ್ಗೆ ರೌಡಿ ಶೀಟರ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಿಜೆ ಹಳ್ಳಿ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದ್ದು, ರೌಡಿ ಶೀಟರ್ ಮಜರ್ ಕೊಲೆಯಾದ ವ್ಯಕ್ತಿ. ಸ್ಥಳಕ್ಕೆ ಡಿಸಿಪಿ ಶರಣಪ್ಪ ಸಹ ಭೇಟಿ ನೀಡಿ, ಪರಿಶೀಲಿಸಿದರು.
ಬತ್ತಿ ಫೈರೋಜ್ ಮತ್ತು ಆತನ ಹುಡುಗರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬತ್ತಿ ಫೈರೋಜ್ ಕುಟುಂಬದವರೆಲ್ಲಾ ಸೇರಿ ಮಜರ್ ಗೆ ಹೊಡೆದಿದ್ದಾರೆ. ನಿನ್ನೆ ರಾತ್ರಿ ಎರಡೂ ಕಡೆಯವರು ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಇಂದು ಬೆಳಗ್ಗೆ ಮನೆಯಲ್ಲಿದ್ದ ಮಜರ್ನನ್ನು ಕರೆಯಿಸಿಕೊಂಡಿದ್ದಾರೆ. ಮನೆ ಕಾಂಪೌಂಡ್ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಬಳಿಕ, ಮನೆ ಮುಂದಿನ ರಸ್ತೆಯ ಮಧ್ಯೆ ಮಜರ್ ಹೆಣವಾಗಿ ಬಿದ್ದಿದ್ದಾನೆ.
ಹುಡುಗಿ ವಿಚಾರಕ್ಕೆ ಗಲಾಟೆ :
ಫೈರೋಜ್ ಕುಟುಂಬದ ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಫೈರೋಜ್ ಕುಟುಂಬ ಮಜರ್ ಮೇಲೆ ಕೋಪಗೊಂಡಿತ್ತು. ಹೀಗಾಗಿ ಮನೆಯ ಒಳಗೆ ಸೇರಿಸಿಕೊಂಡು ಮನೆಯ ಮಹಿಳೆಯರು ಮತ್ತು ಪುರುಷರು ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಡಿಜೆ ಹಳ್ಳಿ ಪೊಲೀಸರು ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯರು ಸೇರಿ ನಾಲ್ವರು ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ, ಇಂದು ಬೆಳಗ್ಗೆ 8.15 ಕ್ಕೆ ಈ ಘಟನೆ ನಡೆದಿದೆ. ಫ್ಯಾಮಿಲಿ ಅವರೇ ಈ ಕೊಲೆ ಮಾಡಿರೋ ಬಗ್ಗೆ ಮಾಹಿತಿ ಇದೆ, ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಕೊಲೆ ಶಂಕೆ:
ಮೃತ ವ್ಯಕ್ತಿ 2017 ರಿಂದಲೂ ರೌಡಿಶೀಟರ್ ಆಗಿದ್ದು, ಈ ಹಿಂದೆ ಆತನ ಮನೆ ಮೇಲೆ ರೇಡ್ ಮಾಡಿದ್ದೇವು. ಪೆರೇಡ್ ನೆಡೆಸಿದ ವೇಳೆಯೂ ಆತನನ್ನ ಕರೆಸಿದ್ದೆವು. ವೈಯಕ್ತಿಕ ಕಾರಣದಿಂದ ಈ ಕೊಲೆ ಆಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಹಿಳೆಯರು ಕೂಡ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ರೌಡಿಜಂ ಹಿನ್ನಲೆಯಲ್ಲಿ ಆಗಿರುವ ಕೊಲೆ ಅಲ್ಲ ಎಂದು ಈವರೆಗಿನ ತನಿಖೆಯಲ್ಲಿ ಕಂಡುಬರುತ್ತಿದೆ ಎಂದು ತಿಳಿಸಿದರು.