ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮಾಡಿರುವ ಸಾಲು-ಸಾಲು ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ಹಗೆಯನ್ನ ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನ ಸಾಧಿಸಲು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ಆಡುತ್ತಿದ್ದಾರೆ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇ಼ಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಪ್ರಯತ್ನಿಸುತ್ತಾರೆ. ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನು ಬಯಸುತ್ತಾರೆ ಹಾಗೂ ಅದಕ್ಕೆ ಬೇಕಾದಂತಹ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ಹಾಕುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗುತ್ತಾರೆ ಎಂದಿದ್ದಾರೆ.
ವೈಯಕ್ತಿಕ ನಿಂದನೆಯ ಅಭಿಯಾನ : ಜವಾಬ್ದಾರಿಯುತ ಸ್ಥಾನದಲ್ಲಿದ್ದು ಒಳ್ಳೆಯ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸ ಎಂದು ತೋರಿಸುತ್ತದೆ. ಅದರಲ್ಲೂ ನನ್ನ ವಿರುದ್ಧ ಯಾವುದೋ ವೈಯಕ್ತಿಕ ಹಗೆಯನ್ನಿಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆಯ ಅಭಿಯಾನವನ್ನು ನಡೆಸುತ್ತಿದ್ದಾರೆ.
ನನ್ನ ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳಿಂದ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೋಗಳನ್ನ ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಅವರು ಬಳಸಿದ್ದಾರೆ. ಈ ಫೋಟೋಗಳನ್ನು ನಾನು ಕಳುಹಿಸಿದ್ದೇನೆ ಎನ್ನುವ ಅಧಿಕಾರಿಗಳ ಹೆಸರನ್ನ ಬಹಿರಂಗಪಡಿಸಬೇಕು ಹಾಗೂ ಅವುಗಳ ಬಗ್ಗೆ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ.
ರೂಪಾ ಐಪಿಎಸ್ ಅವರ ಮೇಲೆ ಕಾನೂನು ಕ್ರಮ: ರೋಹಿಣಿ ಸಿಂಧೂರಿ: ನನ್ನ ವಿರುದ್ಧ ರೂಪಾ ಐಪಿಎಸ್ ಅವರು ನಡೆಸುತ್ತಿರುವ ವೈಯಕ್ತಿಕ ನಿಂದನೆ ಹಾಗೂ ತೇಜೋವಧೆಯ ವಿರುದ್ಧ ನಾನು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪಾ ಐಪಿಎಸ್ ಅವರ ಮೇಲೆ ಕಾನೂನಿನ ಎಲ್ಲಾ ಕ್ರಮಗಳನ್ನ ಕೈಗೊಳ್ಳುತ್ತೇನೆ. ಸಕ್ಷಮ ಪ್ರಾಧಿಕಾರದ ಮುಂದೆಯೂ ದೂರನ್ನ ಸಲ್ಲಿಸಲಿದ್ದೇನೆ ಎಂದಿದ್ದಾರೆ.
ಇದಕ್ಕೂ ಮುಂಚಿತವಾಗಿ ಬೆಂಗಳೂರಿನಲ್ಲಿ ಮಾತನಾಡಿದ್ದ ಐಪಿಎಸ್ ಅಧಿಕಾರಿ ರೂಪ ಅವರು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಜೊತೆ ಸಂಧಾನಕ್ಕೆ ಹೋಗಿರುವುದು ಏತಕ್ಕಾಗಿ? ಹಾಗಾದರೆ ಏನಾದರೂ ಮುಚ್ಚಿಡುವ ಪ್ರಯತ್ನ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದರು.
ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು?.. ರೋಹಿಣಿ ಸಿಂಧೂರಿಗೆ ಪ್ರಶ್ನೆಗಳನ್ನ ಹಾಕಿರುವ ಡಿ ರೂಪಾ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ 'ನೀವು ಏನು ಕೇಳಬೇಡಿ (ಮಾಧ್ಯಮಗಳಿಗೆ) ನಾನೇ ಎಲ್ಲಾ ಹೇಳುತ್ತೇನೆ. ನಾನು ಹೇಳಿದ್ದು ಪೂರ್ತಿ ತೋರಿಸಿ. ನಾನು ಹೇಳುವುದಕ್ಕೆ ನಾಚಿಕೆ ಮಾಡಿಕೊಳ್ಳುವುದಿಲ್ಲ. ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇವರು ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು. ನಾನು ಯಾರ ಜೊತೆಗೂ ಸಂಧಾನಕ್ಕೆ ಹೋಗಿಲ್ಲ. ಇದೇ ಮೊದಲು ಐಎಎಸ್ ಅಧಿಕಾರಿ ಈ ರೀತಿ ಮಾಡಿರೋದು ಎಂದು ಹೇಳಿದ್ದರು.
ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಬ್ಬ ಐಎಎಸ್ ಅಧಿಕಾರಿ ತಾನು ಮಾಡಿರುವ ಕೆಲಸಕ್ಕೆ ಎಂಎಲ್ಎ ಹತ್ತಿರ ಸಂಧಾನಕ್ಕೆ ಹೋಗಿರುವುದನ್ನು ನಾನು ಕೇಳುತ್ತಿದ್ದೇನೆ. ಈ ವಿಷಯ ಕೇಳಿ ನನಗೆ ತುಂಬಾ ನೋವಾಯಿತು. ಈ ಮಟ್ಟಿಗೆ ಒಬ್ಬ ಐಎಎಸ್ ಅಧಿಕಾರಿ ಇಳಿದಿದ್ದಾರಾ? ಅಂತ. ಸರ್ಕಾರದ ನಿಯಮದಲ್ಲೇ ಇಲ್ಲ ಇದು. ಹಾಗಾಗಿ ಆ ನಿಟ್ಟಿನಲ್ಲಿ ನಾನು ಕೆಲವೊಂದು ಪಾಯಿಂಟ್ಸ್ಗಳನ್ನು ಬರೆದೆ. ಕೇವಲ ಅಷ್ಟೇ ಬರೆದರೆ ಸರಿಯಾಗಲ್ಲ. ಆ ನಿಟ್ಟಿನಲ್ಲಿ ಇವರ ನಡವಳಿಕೆ ಪ್ರಾರಂಭದಿಂದ ಹೇಗಿತ್ತು? ಎಂಬುದನ್ನು ಬರೆದಿದ್ದೇನೆ. ಕೆಲವರು ಅದನ್ನೂ ಕೇಳಿದ್ದೀರಿ. ಹಿಂದಿನದೆಲ್ಲ ಯಾಕೆ ಸೇರಿಸಿ ಬರೆದಿದ್ದೀರಿ ಅಂತ. ಎಷ್ಟೋ ಹಿಂದಿನ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿ ಬೆಳೆಯುತ್ತ ಬೆಳೆಯುತ್ತಾ ಗೊತ್ತಾಗುತ್ತದೆ. ನಮ್ಮ ಮನೆಯವರು ಹಾಗೂ ನಾನು ಇವರಿಗೆ ಅನೇಕ ವಿಷಯಗಳಲ್ಲಿ ಡ್ರಾಫ್ಟ್ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದರು.
ಇದನ್ನೂ ಓದಿ : ಸಂಧಾನಕ್ಕೆ ಹೋಗಿ ಏನು ಮುಚ್ಚಿಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ? ಸಿಂಧೂರಿಗೆ ರೂಪಾ ಪ್ರಶ್ನೆ