ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ಒದಗಿಸದ ಹಿನ್ನೆಲೆ ಅರ್ಜಿದಾರರಿಗೆ 1 ಲಕ್ಷ ರೂ. ಪರಿಹಾರ ಮೊತ್ತ ನೀಡುವಂತೆ ಮಾಹಿತಿ ಹಕ್ಕು ಆಯೋಗ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಆದೇಶ ನೀಡಿದೆ.
ಸುಧನ್ವ ಭಂದೋಲ್ಕರ್ ಎಂಬವರು 2015ರ ಕೆಪಿಎಸ್ಸಿ ಪ್ರೊಬೇಷನರಿ ಹುದ್ದೆಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡುವಂತೆ ಕೆಪಿಎಸ್‍ಸಿಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮನವಿ ಮಾಡಿಕೊಂಡಿದ್ದರು. ಆದರೆ ಕೆಪಿಎಸ್ಸಿ ಸೆಕ್ಷನ್ ಅಧಿಕಾರಿ ಶಶಿಕಲಾ ಮಾಹಿತಿ ನೀಡದೆ ಅರ್ಜಿದಾರರನ್ನು ಅಲೆದಾಡುವಂತೆ ಮಾಡಿದ್ದರು. ಈ ಬಗ್ಗೆ ಸುಧನ್ವ ಭಂದೋಲ್ಕರ್ ಅವರು ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಮಾಹಿತಿ ಹಕ್ಕು ಆಯೋಗ ಶಶಿಕಲಾ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು. ಆದರೂ, ಶಶಿಕಲಾ ಅವರು ದಂಡವನ್ನು ಪರಿಗಣಿಸದೇ, ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಈ ಹಿನ್ನೆಲೆ ಮಾಹಿತಿ ಹಕ್ಕು ಆಯುಕ್ತ ಕೆ.ಪಿ. ಮಂಜುನಾಥ್, ಕೆಪಿಎಸ್‍ಸಿಗೆ 1 ಲಕ್ಷ ರೂ. ಪರಿಹಾರವನ್ನು ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದೆ.
ಜತೆಗೆ ಮಾಹಿತಿ ಕೇಳಿದ್ದ ಸುಧನ್ವ ಅವರಿಗೆ ಅಗತ್ಯ ಮಾಹಿತಿಯನ್ನು ಒಂದು ತಿಂಗಳಲ್ಲಿ ಒದಗಿಸುವಂತೆ ಸೂಚನೆ ನೀಡಿದ್ದು, ಈ ಆದೇಶ ಪಾಲಿಸಲು ಕ್ರಮ ವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ಗೆ ಮಾಹಿತಿ ಹಕ್ಕು ಆಯೋಗ ಸೂಚಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದೆ.