ಬೆಂಗಳೂರು : ಆಜಾದಿ ಕಾ ಅಮೃತ್ ಮಹೋತ್ಸವದಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಮ್ಮ ದೇಶದ ಪ್ರತಿಯೊಬ್ಬ ಸೈನಿಕ ನಮ್ಮನ್ನು ರಕ್ಷಿಸಿದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಾವು ಸುರಕ್ಷಿತವಾಗಿರಲು ಸೈನಿಕರು ಕಾರಣ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ದೇಶದ 75ನೇ ಸ್ವಾತಂತ್ರೋತ್ಸವದ ಹಿನ್ನೆಲೆ ಎನ್‌ಎಸ್‌ಜಿ (ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್) ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳಿಂದ ದೇಶಾದ್ಯಂತ ಕಾರು ಜಾಥಾದ ಪ್ರಯುಕ್ತ ಇಂದಿರಾಗಾಂಧಿ ಸಂಗೀತ ಕಾರಂಜಿಯ ಯುದ್ಧ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಅಕ್ಟೋಬರ್ 2ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಜಾಥಾ ಆರಂಭವಾಗಿತ್ತು. ಇಂದು ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಾರು ರ್ಯಾಲಿ ಬೆಂಗಳೂರಿಗೆ ಆಗಮಿಸಿತ್ತು. ಬೆಂಗಳೂರಿನ ರಾಷ್ಟ್ರೀಯ ಸ್ಮಾರಕದಲ್ಲಿ ಕಾರು ಜಾಥಾಗೆ ರಾಜ್ಯ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿದರು.
700 ಕಿ.ಮೀ ಕಾರು ಜಾಥಾ : ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 700 ಕಿ.ಮೀ ಕಾರು ರ್ಯಾಲಿ ಸಂಚರಿಸಲಿದೆ. ಯುವಕರಲ್ಲಿ ಸ್ವತಂತ್ರ ಸಂಗ್ರಾಮದ ಏಕತೆ ಮತ್ತು ದೇಶ ಸಾರ್ವಭೌಮದ ಜಾಗೃತಿ ಮೂಡಿಸಲು ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು ಕಾರು ರ್ಯಾಲಿ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಜನತೆಗೆ ಅರ್ಪಣೆ : 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ಮಹೋತ್ಸವ ಆಚರಿಸುತ್ತಿರುವುದನ್ನು ಜನತೆಗೆ ಅರ್ಪಿಸುತ್ತೇನೆ. ನಮ್ಮ ಉದ್ದೇಶ ಭಾರತದ ವಿವಿಧ ಜನರ ನಡುವೆ ಪರಸ್ಪರ ತಿಳುವಳಿಕೆ, ಸಂಸ್ಕೃತಿ ಸಾರುವುದು ಎಂದು ಹೇಳಿದರು.
ಬೇಜವಾಬ್ದಾರಿ ಮಾತಿಗೆ ನಯಾ ಪೈಸೆ ಬೆಲೆ ಇಲ್ಲ : 100 ಕೋಟಿ ಲಸಿಕೆ ನೀಡಿರುವ ಕುರಿತು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ಹಂಚಿಕೊಂಡಿದೆ. ಈ ಕುರಿತು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ದೇಶದ ಪ್ರಧಾನಿಗಳು ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಬ್ಲ್ಯೂಹೆಚ್‌ಒ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದರೂ ಮೂರು ಪೈಸೆ ಬೆಲೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಅಕ್ಟೋಬರ್ 2ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಜಾಥಾ ಆರಂಭವಾಗಿದೆ. ಈ ಹಿನ್ನೆಲೆ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಾರು ರ್ಯಾಲಿ ಬೆಂಗಳೂರಿಗೆ ಆಗಮಿಸಿತ್ತು. ನಗರದ ರಾಷ್ಟ್ರೀಯ ಸ್ಮಾರಕದಲ್ಲಿ ಕಾರು ಜಾಥಾಗೆ ರಾಜ್ಯ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಿದರು.
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಣ್ಣಪುಟ್ಟ ಜನ ಇದಕ್ಕೆ ಮಾತಾಡಿದರೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಆದರೂ, ಸಿದ್ದರಾಮಯ್ಯ ವಿರೋಧ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಹೀಗೆಯೇ ಮಾತನಾಡುತ್ತಿರಲಿ, ಅಭಿಯಾನಕ್ಕೆ ಇನ್ನೂ ಕಳೆ ಬರುತ್ತದೆ. ಪ್ರಧಾನಿ ಮೋದಿಯನ್ನು ಟೀಕೆ ಮಾಡದೇ ಹೋದರೆ ಕಾಂಗ್ರೆಸ್ ಪಕ್ಷದವರಿಗೆ ತಿಂದಿದ್ದು ಜೀರ್ಣ ಆಗೋದಿಲ್ಲ. ಕುಡಿಯುವ ನೀರು ಕೂಡ ಒಳಗೆ ಹೋಗಲ್ಲ ಎಂದು ಕಿಡಿಕಾರಿದರು.
ಕನಿಷ್ಠ ಪರಿಜ್ಞಾನ ಇಲ್ಲ : ಟೀಕೆ ಮಾಡುವುದು ಕಾಂಗ್ರೆಸ್ ಪಕ್ಷದವರ ಹುಟ್ಟು ಗುಣ. ಕಾಂಗ್ರೆಸ್ ಹೈಕಮಾಂಡ್ ಕೂಡ ಮೋದಿಯನ್ನ ಹಳಿಯಲು ಹೇಳಿದೆ. ಯಾವುದಕ್ಕೆ ಟೀಕೆ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಕೂಡ ಸಿದ್ದರಾಮಯ್ಯಗೆ ಇಲ್ಲ. ಒಂದು ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯದನ್ನು ಹೇಳಬೇಕು. ಆದ್ದರಿಂದ, ಇಂತಹ ನಾಯಕನ ಬಗ್ಗೆ ನಮಗೆ ಬೇಸರ ಆಗುತ್ತಿದೆ ಎಂದು ಕೆಂಡಕಾರಿದರು.
ಉತ್ತರಾಕಾಂಡ ಪ್ರವಾಹ : ಉತ್ತರಾಕಾಂಡ ರಾಜ್ಯದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯ ನಡೆಯುತ್ತಿದೆ. ನಮ್ಮವರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. ರಾಜ್ಯದ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ತವರಿಗೆ ವಾಪಸ್ ಕರೆ ತರುವ ಕೆಲಸ ಆಗುತ್ತದೆ ಎಂದು ಹೇಳಿದರು.
ಓದಿ: ವೈರಸ್ ನಿರ್ನಾಮವಾಗಿದೆ ಎಂದುಕೊಂಡು 2ನೇ ಡೋಸ್ ಪಡೆಯಲು ಜನ ಹಿಂದೇಟು: ಸಚಿವ ಸುಧಾಕರ್