ಬೆಂಗಳೂರು: ಜನರ ಪರವಾಗಿ ನಿಲ್ಲುವ ಗುಣ ಯಡಿಯೂರಪ್ಪ ಅವರಿಗೆ ರಕ್ತಗತವಾಗಿಯೇ ಬಂದಿದೆ. ಯಾವುದೇ ಸಮಸ್ಯೆ ಬಂದರೂ ಜನಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಬಿಎಸ್ವೈ ರಾಜೀನಾಮೆ ಸನ್ನಿಹಿತವಾಗುತ್ತಿದ್ದರೂ ಸಹ ಸಿಎಂ ಕರ್ತವ್ಯ ನಿಷ್ಠೆಯನ್ನು ಕಂದಾಯ ಸಚಿವ ಅಶೋಕ್ ಶ್ಲಾಘಿಸಿದರು.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಅವರು ರೈತ ಪರವಾಗಿ ಹೋರಾಟ ಮಾಡಿ, ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಹೋರಾಟದಿಂದಲೇ ಬಂದಿರುವ ಯಡಿಯೂರಪ್ಪನವರು ದೇಹದಲ್ಲಿ ರಕ್ತ ಇರೋವರೆಗೂ ಜನಪರ ಕೆಲಸ ಮಾಡುತ್ತಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಕೊಂಡಾಡಿದರು.
ನಾಯಕತ್ವ ಕುರಿತು ಹೈಕಮಾಂಡ್ ಇಂದು ನೀಡುವ ಸೂಚನೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಇಂದು ಹೈಕಮಾಂಡ್ನಿಂದ ಸಂದೇಶ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಆ ರೀತಿಯ ಸಂದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ದೃಷ್ಟಿ ಜನರ ಕಷ್ಟ ದೂರ ಮಾಡುವುದು ಮಾತ್ರ. ಕೇಂದ್ರದ ಮಾಹಿತಿ ಕುರಿತು ನೀವು ಸಿಎಂ ಬಳಿಯೇ ಕೇಳಬೇಕು. ನಮ್ಮ ಗಮನ ಪರಿಹಾರ ಕ್ರಮಗಳತ್ತ ಮಾತ್ರ ಎಂದರು.