ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಎದುರಾಗಿದೆ. ಸರ್ಕಾರ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಅರ್ಧದಷ್ಟು ಬೆಡ್ಗಳನ್ನು ಮೀಸಲು ಇಡುವಂತೆ ಸೂಚಿಸಿತ್ತು. ಆದರೆ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಅಧಿಕ ಹಣ ಲೂಟಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಇದಕ್ಕೆ ಕಡಿವಾಣ ಹಾಕಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ತಂಡವನ್ನ ಸರ್ಕಾರ ನೇಮಕ ಮಾಡಿದೆ. ಖಡಕ್ ಅಧಿಕಾರಿ ಎಂದು ಹೆಸರು ವಾಸಿಯಾಗಿರುವ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು 4 ಖಾಸಗಿ ಆಸ್ಪತ್ರೆಗಳಾದ ಮಣಿಪಾಲ್ ಆಸ್ಪತ್ರೆ, ಬಿ.ಆರ್ ಅಂಬೇಡ್ಕರ್, ಸೆಂಟ್ ಫಿಲೋಮಿನಾ ಆಸ್ಪತ್ರೆ ಹಾಗೂ ಚಿನ್ಮಯ ಮಿಷನ್ ಆಸ್ಪತ್ರೆಗಳಿಗೆ ರೋಗಿಗಳ ಬಳಿಯಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದ್ದರೆ ಮರು ಪಾವತಿಸುವಂತೆ ತಿಳಿಸಿದ್ದಾರೆ.
ಕೊರೊನಾ ಸೋಂಕು ಬಂದ ವ್ಯಕ್ತಿಗೆ ಕನಿಷ್ಠ ಅಂದರೆ 5 ಸಾವಿರದಿಂದ 10 ಸಾವಿರ ರೂ. ಖರ್ಚಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ಬಿಲ್ ಮಾಡಿದ್ದರಿಂದ ಬಹುತೇಕ ಮಂದಿ ಹಣವಿಲ್ಲದೇ ಪರದಾಡಿದ್ದಾರೆ. ಸದ್ಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ತಂಡ ಪ್ರತಿ ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಣಿಟ್ಟಿದೆ.