ಬೆಂಗಳೂರು : ಸರ್ಕಾರಿ ನೌಕರನ ವಿರುದ್ಧ ಮೂರನೇ ವ್ಯಕ್ತಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ನೀಡಿದ್ದಲ್ಲಿ, ಆ ನೌಕರನ ನಿವೃತ್ತಿಯ ಬಳಿಕ ಪಿಂಚಣಿ ಸೇರಿದಂತೆ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವುದು ನ್ಯಾಯಾಂಗ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ ಎಂಬುದಾಗಿ ಅರ್ಥೈಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಭ್ರಷ್ಟಾಚಾರ ಆರೋಪದಲ್ಲಿ ದೂರು ದಾಖಲಾಗಿದ್ದ ನಿವೃತ್ತ ನೌಕರನಿಗೆ ಪಿಂಚಣಿ ತಡೆಹಿಡಿದ ಕ್ರಮವನ್ನು ರದ್ದುಪಡಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ವು ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ವಿಜಯ್ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೆಪಿಟಿಸಿಎಲ್ನ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ. ಜತೆಗೆ, ಆದಷ್ಟು ಶೀಘ್ರದಲ್ಲಿ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿದೆ.
ಕಾನೂನು ಪ್ರಕಾರ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಮೂರನೇ ವ್ಯಕ್ತಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳ ನಿಯಮಾವಳಿ 171ರಡಿ ಕ್ರಮಕ್ಕೆ ಮುಂದಾಗುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಲ್ಲಿ ನಿವೃತ್ತರಾದ ನೌಕರನ ಪಿಂಚಣಿಯನ್ನು ತಡೆಹಿಡಿಯಲು ಅವಕಾಶಗಳಿಲ್ಲ ಎಂದು ಪೀಠ ತಿಳಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಉದ್ಯೋಗದಾತರಿಗೆ ಯಾವುದೇ ಸಮಸ್ಯೆ ಮಾಡಿಲ್ಲ ಎಂದು ಏಕ ಸದಸ್ಯ ಪೀಠ ಸ್ಪಷ್ಟಪಡಿಸಿದೆ. ಜತೆಗೆ, ಅವರು 2022ರ ಮೇ 32ರಂದು ನಿವೃತ್ತಿಯಾಗಿದ್ದರು.
ಈ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಪ್ರಕ್ರಿಯೆ ಪ್ರಾರಂಭಿಸಿರಲಿಲ್ಲ. ಆದರೆ, 2022ರ ಜೂನ್ 1 ರಂದು ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರೋಸಿಡಿಂಗ್ಸ್ ಗೆ ಮುಂದಾಗಿದ್ದರು. ಜತೆಗೆ, ತನಿಖೆ 2022ರ ಆಗಸ್ಟ್ 6 ರಂದು ಆರೋಪ ಪಟ್ಟಿಯನ್ನು ದಾಖಲಿಸಿದ್ದರು. ಹೀಗಾಗಿ ನಿವೃತ್ತಿಯಾದ ಮೇಲೆ ಕ್ರಿಮಿನಲ್ ಪ್ರೋಸಿಡಿಂಗ್ಸ್ ಪ್ರಾರಂಭಿಸಿರುವುದರಿಂದ ಅವರ ನಿವೃತ್ತಿ ಬಾಕಿ ವೇತನವನ್ನು ತಡೆಯುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು? : ಪ್ರಕರಣದ ಅರ್ಜಿದಾರರಾದ ಮಲ್ಲಿಕಾರ್ಜುನ್ ಕೆಪಿಟಿಸಿಎಲ್ ನಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತಿಯಾಗಿದ್ದರು. 2018ರ ಏಪ್ರಿಲ್ 9 ರಂದು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಮೂರನೇ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದ ಎಸಿಬಿ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೇ ಕಾರಣದಿಂದ ಅರ್ಜಿದಾರರು ಅಮಾನತ್ತುಗೊಂಡಿದ್ದರು. ಬಳಿಕ ಸೇವೆ ಮುಂದುವರೆಸಿ, 2022ರ ಮೇ 31ರಂದು ಸೇವೆಯಿಂದ ನಿವೃತ್ತರಾಗಿದ್ದರು.
ನಿವೃತ್ತರಾದ ಬಳಿಕ ಪಿಂಚಣಿ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ 2022ರ ಜೂನ್ 28ರಂದು ಕೆಪಿಟಿಸಿಎಲ್ ಹಿಂಬರಹ ನೀಡಿತ್ತು. ಅಲ್ಲದೆ, ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಶೇ.50 ರಷ್ಟು ನಿವೃತ್ತಿ ವೇತನ ಮತ್ತು ಪಿಂಚಣಿ ಸಿಗಲಿದೆ ಎಂದು ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯಪೀಠ, ಕೆಪಿಟಿಸಿಎಲ್ನ ಹಿಂಬರಹವನ್ನು ರದ್ದುಪಡಿಸಿ, ಸಂಪೂರ್ಣ ಪಿಂಚಣಿ ಪಾವತಿಸುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಪಿಟಿಸಿಎಲ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ : ಕುಟುಂಬ ಪಿಂಚಣಿ ಪಡೆಯಲು ಎರಡನೇ ಪತ್ನಿ ಅರ್ಹರಲ್ಲ: ಹೈಕೋರ್ಟ್