ನೆಲಮಂಗಲ: ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಗೆ ಬೆಂಬಲಿಗರಿಂದ ಭವ್ಯ ಸ್ವಾಗತ ಸಿಕ್ಕ ಹಿನ್ನಲೆ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಬೇಸರ ವ್ಯಕ್ತ ಪಡಿಸಿದ್ದಾರೆ. ಬರೀ ಶ್ರೀಮಂತಿಕೆ ಮತ್ತು ಅಧಿಕಾರಿಗಳ ಸಮಾಜದಲ್ಲಿ ನಾವಿದ್ದೇವೆ. ತಪ್ಪು ಮಾಡಿದವರನ್ನ ದೂರ ಇರಿಸುವ ಸಮಾಜ ಕಟ್ಟಬೇಕೆಂದು ಇವತ್ತಿನ ಸಮಾಜದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ ದಾಸನಪುರದ ಹವಾರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಆಯೋಜಿಸಿದ 68ನೇ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು 150ನೇ ಮಹಾತ್ಮ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇವತ್ತು ಜೈಲಿಗೆ ಹೋಗಿ ಬಂದವರಿಗೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದರಿಂದ ಸಮಾಜದಲ್ಲಿ ತಪ್ಪು ಬದಲಾವಣೆಗಳು ಆಗ್ತಿವೆ. ಬರೀ ಶ್ರೀಮಂತಿಕೆ ಹಾಗೂ ಅಧಿಕಾರಿಗಳ ಸಮಾಜದಲ್ಲಿ ನಾವಿದ್ದೇವೆ, ಈ ಸಮಾಜವನ್ನು ಬದಲಾಯಿಸಬೇಕು, ಪ್ರಾಮಾಣಿಕರಿಗೆ ಬೆಲೆ ಕೊಡುವ ಸಮಾಜ ಕಟ್ಟಬೇಕು. ತಪ್ಪು ಮಾಡಿದವರನ್ನ ದೂರ ಇರಿಸಬೇಕು ಅನ್ನೋ ಸಮಾಜ ಕಟ್ಟಬೇಕು ಎಂಬುದು ನನ್ನ ಅನಿಸಿಕೆ ಎಂದರು.
ಯಡಿಯೂರಪ್ಪ ವಿರುದ್ಧ ಕಿಡಿ;
ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಆಡಳಿತಕ್ಕೆ ಬಂದಾಗ ಮತ್ತೊಂದು ನಿಲುವು ತಾಳುತ್ತಾರೆ. ವಿರೋಧ ಪಕ್ಷದಲ್ಲಿದ್ದಾಗ ಗಣಿ ವಿಚಾರದಲ್ಲಿ ಲೋಕಾಯುಕ್ತದ ಮಸೂದೆ ಜಾರಿಗಾಗಿ ಒಬ್ರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರು, ಕೆಲ ತಿಂಗಳ ನಂತರ ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿನೂ ಆದ್ರು .ಅವರು ಆ ಮಸೂದೆಯನ್ನ ಜಾರಿಗೆ ತರಲಿಲ್ಲ ತದ್ವಿರುದ್ದವಾಗಿ ನಡೆದುಕೊಂಡ್ರು ಎಂದಿದ್ದಾರೆ.
ಅಲ್ಲದೇ, ಭ್ರಷ್ಟಾಚಾರದ ವಿಚಾರಣೆ ಅಧಿಕಾರವನ್ನು ಅಲ್ಲಿಂದ ಕಿತ್ಕೊಂಡು ಎಸಿಬಿಗೆ ಕೊಡ್ತಾರೆ. ಆಗ ವಿರೋಧ ಪಕ್ಷದಲ್ಲಿದ್ದವರು ಎಸಿಬಿಗೆ ವಿರೋಧ ಮಾಡ್ತಾರೆ, ಅಧಿಕಾರಕ್ಕೆ ಬಂದ್ರೆ ಲೋಕಾಯುಕ್ತವನ್ನ ಬಲಪಡಿಸ್ತೇವೆ ಅಂತಾರೆ, ಎಸಿಬಿಯನ್ನ ದುರ್ಬಲಗೊಳಿಸಿ, ಅಧಿಕಾರವನ್ನ ಲೋಕಾಯುಕ್ತಕ್ಕೆ ಕೊಡ್ತಿವಿ ಅಂತಾರೆ. ಆ ಪಕ್ಷ ಇಂದು ಅಧಿಕಾರಕ್ಕೆ ಬಂದಿದೆ. ಎಸಿಬಿ ಉತ್ತಮವಾದ ಕೆಲಸ ಮಾಡ್ತಾ ಇದೆ, ಅದನ್ನ ನಾವು ಮುಂದುವರೆಸುತ್ತೇವೆ ಎಂದು ಹೇಳ್ತಾರೆಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಹ ಕಿಡಿಕಾರಿದರು.