ಬೆಂಗಳೂರು: ಬೆಂಗಳೂರು ಹೈಕೋರ್ಟಿನ ಪ್ರಧಾನ ಪೀಠ ಸಂಕೀರ್ಣದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲು ಎರಡು ವಾರ ಕಾಲಾವಕಾಶ ನೀಡುವಂತೆ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
ಈ ಕುರಿತು ತುಮಕೂರಿನ ವಕೀಲ ಎಲ್. ರಮೇಶ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಹೈಕೋರ್ಟ್ ತಳಮಹಡಿಯ ಕಚೇರಿಗಳನ್ನು ಸ್ಥಳಾಂತರಿಸಲು ಗುರುತಿಸಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ತಾಂತ್ರಿಕ ಶಿಕ್ಷಣ ಇಲಾಖೆ ಕಚೇರಿಯ ನೆಲಮಹಡಿಯನ್ನು ಹೈಕೋರ್ಟ್‌ಗೆ ಬಿಟ್ಟುಕೊಡುವ ಪ್ರಸ್ತಾವನೆಯ ಕಡತ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿಯವರ ಬಳಿ ಇದೆ. ಈ ಪ್ರಸ್ತಾವನೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಒಪ್ಪಿದ ಪೀಠ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ರಾಜ್ಯ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಸಂಕೀರ್ಣದಲ್ಲಿ ಕೋರ್ಟ್ ಹಾಲ್ ಹಾಗೂ ನ್ಯಾಯಮೂರ್ತಿಗಳ ಕಚೇರಿಗಳು ಹೊರತುಪಡಿಸಿ ಬೋರ್ಡ್ ಬ್ರ್ಯಾಂಚ್, ಸಿವಿಲ್, ಕ್ರಿಮಿನಲ್, ಡಿಕ್ರಿ, ಇಂಡೆಕ್ಸ್, ಫೈಲಿಂಗ್ ಕೌಂಟರ್, ಪೆಂಡಿಂಗ್ ಬ್ರ್ಯಾಂಚ್, ಕೋರ್ಟ್ ಫೀ ಬ್ರ್ಯಾಂಚ್ ಮತ್ತಿತರೆ ಕಚೇರಿ ಹಾಗೂ ಶಾಖೆಗಳು ತಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ಕಚೇರಿ ಸಿಬ್ಬಂದಿಗೆ ಹಾಗೂ ಕೆಲಸದ ನಿಮಿತ್ತ ಬರುವವರಿಗೆ ಅನಾನುಕೂಲವಾಗಿದೆ.
ವಿಶೇಷವಾಗಿ ಅಲ್ಲಿನ ಸಿಬ್ಬಂದಿ ಪ್ರತಿದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದ್ದು, ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.