ಬೆಂಗಳೂರು: ಕರ್ನಾಟಕ ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮುಂಚೂಣಿ ರಾಜ್ಯ. ತನ್ನ ಅಭಿವೃದ್ಧಿ ಪಥದಲ್ಲಿ ರಸ್ತೆ ಮೂಲಸೌಕರ್ಯ ಪ್ರಮುಖ ಕೊಡುಗೆ ನೀಡಿದೆ. ರಸ್ತೆ ಅಭಿವೃದ್ಧಿಯಲ್ಲಿ ರಾಜ್ಯ ಉತ್ತಮ ಪ್ರಗತಿಯನ್ನು ಹೊಂದಿದ್ದು, ಇತ್ತೀಚಿನ ಆರ್ಥಿಕ ಸಂಕಷ್ಟದಿಂದ ರಸ್ತೆ ಕಾಮಗಾರಿ, ನಿರ್ವಹಣೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ. ರಾಜ್ಯದ ಸಮಗ್ರ ರಸ್ತೆ ಅಭಿವೃದ್ಧಿಯ ಸ್ಥಿತಿಗತಿಯ ವರದಿ ಇಲ್ಲಿದೆ.
ರಾಜ್ಯದ ಪ್ರತಿ ಜಿಲ್ಲೆಗಳು ವೇಗವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ. ರಾಜ್ಯದ ಈ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿರುವುದು ರಸ್ತೆಗಳು. ರಸ್ತೆ ಅಭಿವೃದ್ಧಿಯಲ್ಲಿ ರಾಜ್ಯ ಉತ್ತಮ ಸಾಧನೆ ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ರಾಜ್ಯದಲ್ಲಿ ಸುಮಾರು 7652.43 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳಿದ್ದರೆ, 19,383.68 ಕಿ.ಮೀ. ರಾಜ್ಯ ಹೆದ್ದಾರಿಗಳಿವೆ. ಇನ್ನು ಸುಮಾರು 49,565.32 ಕಿ.ಮೀ. ಉದ್ದದ ಜಿಲ್ಲಾ ಪ್ರಮುಖ ರಸ್ತೆಗಳಿದ್ದು, ಎಲ್ಲಾ ಸೇರಿ ಒಟ್ಟು ಸುಮಾರು 76,201.43 ಕಿ.ಮೀ. ಉದ್ದದ ರಸ್ತೆಗಳನ್ನು ರಾಜ್ಯ ಹೊಂದಿದೆ.
ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಹಣ ವ್ಯಯಿಸುತ್ತದೆ. ಇತ್ತ ಕೇಂದ್ರ ಸರ್ಕಾರವೂ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳಿ ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಅನೇಕ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.
ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿವರ
ರಾಜ್ಯದಲ್ಲಿ ಅನೇಕ ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇನ್ನು ಹಲವು ಪ್ರಮುಖ ರಸ್ತೆ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಕಳೆದ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ಒಟ್ಟು 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದೆ. 10,904 ಕೋಟಿ ರೂ. ವೆಚ್ಚದ ಸುಮಾರು 1,197 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಡಿಗಲ್ಲು ಹಾಕಿದೆ.
ಶಿರಸಿ - ಕುಮುಟಾ-ಬೆಲೆಕೇರಿ (58.92 ಕಿ.ಮೀ.) ಎರಡು ಪಥದ ಎನ್ಎಚ್ 766E, 766EE, ದಾಬಸ್ಪೇಟೆ-ದೊಡ್ಡಬಳ್ಳಾಪುರ (ಎನ್ಎಚ್ 648)ನಾಲ್ಕು ಪಥಗಳ 42 ಕಿ.ಮೀ ಉದ್ದದ ಬೆಂಗಳೂರು ರಿಂಗ್ ರಸ್ತೆ, ದ.ಕನ್ನಡದ ಕೂಳೂರು ಬಳಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಎನ್ಎಚ್ 66ನಲ್ಲಿ 6 ಪಥದ ಸೇತುವೆ, ಔರಾದ್-ಬೀದರ್ ವಿಭಾಗದಲ್ಲಿ ಎನ್ಎಚ್ 161A, ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯ ಉನ್ನತೀಕರಣ ಮಾಡಲಾಗುತ್ತಿದೆ.
ಸೋಲಾಪುರ-ಮಂಗಳೂರು ವಿಭಾಗದಲ್ಲಿನ ಎರಡು ಪಥದ ಎನ್ಎಚ್ 169ನಲ್ಲಿ 60-110 ಕಿ.ಮೀ. ವರೆಗೆ ರಸ್ತೆ ಅಗಲೀಕರಣ, ಭಾಣಾಪುರ-ಗಡ್ಡನ್ಕೇರಿ ವಿಭಾಗದಲ್ಲಿನ ಎನ್ಎಚ್ 367ರಲ್ಲಿ ಎರಡು ಪಥದ ರಸ್ತೆ ಕಾಮಗಾರಿ, ಎನ್ಎಚ್ 275 ಬಂಟ್ವಾಳ-ಮೈಸೂರು-ಬೆಂಗಳೂರು ವಿಭಾಗದಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ, ತಡೆಗೋಡೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ಇಬ್ರಾಮ್ಪುರ-ಟೆಕ್ಕಲಕೋಟೆ ಎರಡು ಪಥದ ರಸ್ತೆಗಳ ಅಗಲೀಕರಣ, ಎನ್ಎಚ್ 150ಎ ಜೇವರ್ಗಿ-ಚಾಮರಾಜನಗರ ವಿಭಾಗದ 15.68 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗಳು ಪ್ರಗತಿಯಲ್ಲಿದೆ.
ಕಳೆದ ಆರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 900 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಿದೆ. 37,311 ಕೋಟಿ ರೂ. ವೆಚ್ಚದಲ್ಲಿ 2,384 ಕಿ.ಮೀ. ಉದ್ದದ ಒಟ್ಟು 71 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ 12,286 ಕೋಟಿ ರೂ. ವೆಚ್ಚದ ಸುಮಾರು 1,127 ಕಿ.ಮೀ. ಉದ್ದದ 26 ರಸ್ತೆ ಕಾಮಗಾರಿಗಳಲ್ಲಿ ಶೇ.70 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಂಕಿ- ಅಂಶ ತಿಳಿಸಿದೆ.
ಇದೇ ವೇಳೆ ಗೋವಾ ಗಡಿಯಿಂದ ಕೇರಳ ಗಡಿವರೆಗಿನ ಸಂಪೂರ್ಣ ಕರಾವಳಿ ರಸ್ತೆ ಜಾಲವನ್ನು ನಾಲ್ಕು ಪಥಗೊಳಿಸಲಾಗುತ್ತಿದೆ. ಬಂದರು ನಗರವಾದ ಬೆಲೆಕೇರಿ, ಕಾರವಾರ ಮತ್ತು ಮಂಗಳೂರನ್ನು ಸಂಪರ್ಕಿಸುವ 278 ಕಿ.ಮೀ. ಉದ್ದದ 3,443 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಎನ್ಎಚ್ 75 ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಎನ್ಎಚ್ 73 ಮತ್ತು ಸಂಪಾಜೆ ಘಾಟ್ ಎನ್ಎಚ್ 275ರಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕಾಮಗಾರಿಗಾಗಿ 115 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.
ಮುಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗಾಗಿ ಸುಮಾರು 1,16,144 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. 2019-21ರ ಅವಧಿಯಲ್ಲಿ ರಾಜ್ಯದಲ್ಲಿ 5,083 ಕೋಟಿ ರೂ. ವೆಚ್ಚದಲ್ಲಿ 275 ಕಿ.ಮೀ. ಉದ್ದದ 11 ರಸ್ತೆ ಕಾಮಗಾರಿ ಯೋಜನೆಗಳನ್ನು ಘೋಷಿಸಲಾಗಿದೆ.
ಪ್ರಮುಖ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿ ಹೇಗಿದೆ?
- 544.49 ಕೋಟಿ ವೆಚ್ಚದಲ್ಲಿ 132.07 ಕಿ.ಮೀ ಉದ್ದದ ಎಂಟು ರಸ್ತೆ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಮತ್ತು ಮೂರು ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.
- ಜತ್-ಜಂಬೋಟಿ ರಸ್ತೆಗೆ 101 ಕಿ.ಮೀ. ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ. 350.14 ಕೋಟಿ ರೂ. ವೆಚ್ಚದ ಈ ಕಾಮಗಾರಿ ಪೈಕಿ 2020 ಮಾರ್ಚ್ ಅಂತ್ಯದವರೆಗೆ ರೂ.312.73 ಕೋಟಿ ರೂ. ಪೂರ್ಣಗೊಂಡಿದೆ.
- ರಾಜ್ಯ ಹೆದ್ದಾರಿ-62 ಹಾವೇರಿ - ಸಾಗರ ರಸ್ತೆ ಮೇಲೆ ಹಾವೇರಿ ಜಿಲ್ಲೆಯಲ್ಲಿನ ಹಿರೇಕೆರೂರು ತಾಲ್ಲೂಕಿನಲ್ಲಿನ ಚಿಕ್ಕೆರೂರು ಪಟ್ಟಣ ಮಿತಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ.
- ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ರಾಜ್ಯ ಹೆದ್ದಾರಿ-21 (ಹಳೆಬೀಡು-ಆನೆಔಕೂರು ರಸ್ತೆ) ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
- ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನಲ್ಲಿ ಸಾಗರ ಕಟ್ಟೆ ಮಾರ್ಗ ಇಲವಾಲದಿಂದ ಕೆ.ಆರ್.ನಗರಕ್ಕೆ 11.40ಕಿ.ಮೀ- 15.60ಕಿ.ಮೀ.ವರೆಗೆ ಸುಧಾರಣೆ ಕಾಮಗಾರಿ ಪೂರ್ಣಗೊಂಡಿದೆ.
- ಹಾಸನ ಜಿಲ್ಲೆಯಲ್ಲಿ ಕೋಡಿಹಳ್ಳಿ ಗ್ರಾಮದ ಬಳಿ (ರಾಜ್ಯ ಹೆದ್ದಾರಿ-121) 1.20 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ.
- ಹೊಳೆನರಸೀಪುರ ತಾಲೂಕಿನ ಹಾಸನ ಜಿಲ್ಲೆಯ ಹಿರಿಸಾವೆ - ಶ್ರವಣಬೆಳಗೊಳ - ಸಿಆರ್ ಪಟ್ಟಣ ಹೊಳೆನರಸೀಪುರ - ಶನಿವಾರಸಂತೆ ರಸ್ತೆಗೆ (ರಾಜ್ಯ ಹೆದ್ದಾರಿ-8) ಕಿ.ಮೀ 47.715ರಿಂದ ಕಿ.ಮೀ 48.666 ರವರೆಗೆ ಬಾಕಿ ಇರುವ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ.
- ಬೆಂಗಳೂರು ಸುತ್ತಮುತ್ತಲಿನ ರಸ್ತೆ ಕಾಮಗಾರಿಗಳಾದ ರಸ್ತೆ ಗ್ರೇಡ್ ಸಪರೇಟರ್ ಮತ್ತು ಉನ್ನತೀಕರಿಸಿದ ರಸ್ತೆಗಳನ್ನೊಳಗೊಂಡ 10 ಪ್ಯಾಕೇಜ್‌ಗಳಲ್ಲಿ 2,095 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಬೆಂಗಳೂರಿನ ಸುತ್ತಮುತ್ತ 155 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಾಲ್ಕು ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ.