ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅವರಿಗೆ ಟಿಕೆಟ್ ಸಿಕ್ಕಿದ್ದು ಮರಳಿ ಪಕ್ಷಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಂದ ಎನ್ನುವುದನ್ನು ಮರೆಯಬಾರದು. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರೆದರೆ ನಮಗೂ ಮಾತನಾಡಲು ಬರುತ್ತದೆ. ದೆಹಲಿಗೆ ತೆರಳಲೂ ಬರುತ್ತದೆ ಎಂದು ಯಡಿಯೂರಪ್ಪ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವ ಇದೆ. ಅವರು ಹಿರಿಯರು. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೆ ಎಂದು ಪದೇ ಪದೇ ಹೇಳುತ್ತಾರೆ. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಅವರು ಸಚಿವರಾಗಿದ್ದರು. ಪಕ್ಷದಿಂದ ಉಚ್ಚಾಟನೆಯಾಗಿದ್ದಾಗ ಅವರ ಮರುಸೇರ್ಪಡೆಗೆ ಎಲ್ಲರೂ ವಿರೋಧ ಮಾಡಿದರೂ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪ ಯಾರ ಮಾತೂ ಕೇಳದೆ ಮರಳಿ ಕರೆತರುವ ದೃಢ ನಿರ್ಧಾರ ಮಾಡಿದ್ದರು. ಆದರೂ ಯಡಿಯೂರಪ್ಪ ವಿರುದ್ಧ ಅವರು ಯಾಕೆ ಈ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ. ಅವರು ಇದೇ ರೀತಿ ಮಾತು ಮುಂದುವರೆಸಿದರೆ, ನಮಗೂ ದೆಹಲಿಗೆ ಹೋಗುವುದು ಗೊತ್ತಿದೆ. ನಮಗೂ ಮಾತನಾಡಲು ಬರುತ್ತದೆ ಎಂದರು.
ಸಂಘರ್ಷ ಯಾರ ವಿರುದ್ಧ ಮಾಡಬೇಕು? ಕಾಂಗ್ರೆಸ್ ವಿರುದ್ಧ ಮಾಡಬೇಕು. ಆಡಳಿತ ಪಕ್ಷದ ವಿರುದ್ಧ ಸಂಘರ್ಷ ಮಾಡಬೇಕು. ಆದರೆ ಪ್ರತಿದಿನ ಪಕ್ಷದ ರಾಜ್ಯದ ಅಧ್ಯಕ್ಷರ ಮೇಲೆ, ಯಡಿಯೂರಪ್ಪ ಮೇಲೆ ಸಂಘರ್ಷ ಮಾಡಿದರೆ ಇದು ಪಕ್ಷ ವಿರೋಧಿ ಚಟುವಟಿಕೆಯಾಗಲಿದೆ. ಈಗಲೂ ಅವರಿಗೆ ವಿನಂತಿ ಮಾಡುತ್ತೇನೆ. ಅವರು ಹಿರಿಯರು, ಅವರು ಪಕ್ಷ ಬಿಟ್ಟ ಸಂದರ್ಭದಲ್ಲಿ ಮತ್ತೆ ವಾಪಸ್ ಕರೆತಂದಿದ್ದು ಯಡಿಯೂರಪ್ಪ. ವಿಜಯಪುರದಲ್ಲಿ ಟಿಕೆಟ್ ಕೊಟ್ಟಿದ್ದು ಯಡಿಯೂರಪ್ಪ ಎಂದು ಮರೆಯಬಾರದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಗೌರವ ಇದೆ. ಅವರು ಹಿರಿಯರು. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ವರ್ಗ, ಎಲ್ಲ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಆದರೆ ಸಿದ್ದರಾಮಯ್ಯ ವಿಶೇಷವಾಗಿ ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದಾರೆ. ಬಿಜೆಪಿ ಯಾವ ಧರ್ಮ, ವರ್ಗದವರ ವಿರುದ್ಧ ಟೀಕೆ ಮಾಡಲ್ಲ. ಎಲ್ಲರೂ ಒಟ್ಟಾಗಿ ಸಹಬಾಳ್ವೆಯಿಂದ ಇರಬೇಕು ಎನ್ನುವುದು ನಮ್ಮ ಭಾವನೆ. ಸಂಘರ್ಷ ನಮಗೆ ಬೇಕಾಗಿಲ್ಲ. ಆದರೆ ಸಿದ್ದರಾಮಯ್ಯ ಎಲ್ಲೋ ಒಂದು ಕಡೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. 34 ಸಾವಿರ ಕೋಟಿ ಹಣ ಬೇಕಿದೆ. ಎಷ್ಟು ಬಿಡುಗಡೆ ಮಾಡಿದ್ದೀರಿ? ಈ ರಾಜ್ಯದ ರೈತನಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿ 15 ದಿನವಾಗಿದೆ. ಇದುವರೆಗೂ ಸರ್ಕಾರದ ಆದೇಶವಾಗಿಲ್ಲ. ನೇರವಾಗಿ ರೈತರ ಖಾತೆಗೆ ಹಣ ಹಾಕಬೇಕು. ನಮ್ಮ ಸರ್ಕಾರ ಇದ್ದಾಗ ಕೇಂದ್ರದ ಕಡೆ ಬೆರಳು ಮಾಡಿದ್ದರು. ನಾವೇ ರೈತರ ಖಾತೆಗೆ ಹಣ ಹಾಕಿದ್ದೆವು. ಎಕರೆಗೆ 13 ಸಾವಿರದಂತೆ ಹಣ ಬಿಡುಗಡೆ ಮಾಡಿದ್ದೆವು. ನೀವೂ ಹತ್ತಾರು ಸಾವಿರ ಕೋಟಿ ರೂ. ಗಳ ಬಿಡುಗಡೆ ಮಾಡಿ, ಅದನ್ನು ಬಿಟ್ಟು ನೀವು ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಡಬೇಕಿದ್ದರೆ, ನಿಮ್ಮ ಆಸ್ತಿ ಮಾರಾಟ ಮಾಡಿಕೊಡಿ. ನಿಮ್ಮ ಈ ನಡೆ ಸಂಘರ್ಷಕ್ಕೆ ಅವಕಾಶ ಆಗಲಿದೆ. ಬಹುಸಂಖ್ಯಾತ ಹಿಂದೂಗಳು ನಿಮ್ಮ ವಿರುದ್ಧ ತಿರುಗಿಬೀಳಲಿದ್ದಾರೆ. ದಂಗೆ ಏಳಲಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದೀರಿ. ತೆಲಂಗಾಣದಲ್ಲಿ ಮಾತ್ರ ನೀವು ಗೆದ್ದಿದ್ದೀರಿ, ಉಳಿದ ಕಡೆ ಸಾರಾಸಗಟಾಗಿ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಮೂರು ರಾಜ್ಯದಲ್ಲಿ ಮಾತ್ರ ನೀವು ಅಧಿಕಾರದಲ್ಲಿ ಇದ್ದೀರಿ. ಇದೇ ರೀತಿ ಮಾಡಿದರೆ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆದಂತೆ ಸಾರಾಸಗಟಾಗಿ ತಿರಸ್ಕಾರ ಮಾಡಲಿದ್ದಾರೆ ಎಂದರು.
ಗೂಳಿಹಟ್ಟಿ ಆರೋಪ ನಿರಾಧಾರ: ಆರ್‌ಎಸ್‌ಎಸ್ ವಿಚಾರದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸಂಘ ಪರಿವಾರದಲ್ಲಿ ಜಾತಿ, ಧರ್ಮ ಯಾವುದನ್ನೂ ಕೇಳುವುದಿಲ್ಲ. ಭಾರತ ಮಾತೆಯ ಫೋಟೋ ಇಟ್ಟು ಪೂಜೆ ಮಾಡುವ ದೇಶಭಕ್ತ ಸಂಘಟನೆ ಅದು. ನಾಗಪುರದಲ್ಲಿ ಅವರಿಗೆ ಅವಮಾನವಾಗಿದ್ದರೆ, ಅದನ್ನು ಘಟನೆ ನಡೆದಾಗಲೇ ಹೇಳಬೇಕಿತ್ತು. 10 ತಿಂಗಳ ಹಿಂದೆಯೇ ಆರೋಪ ಮಾಡಬೇಕಿತ್ತು. ಆಗ ಯಾಕೆ ಮಾಡಲಿಲ್ಲ?. ಈಗ ಯಾವ ಪುರುಷಾರ್ಥಕ್ಕೆ ಆರೋಪ ಮಾಡುತ್ತಿದ್ದೀರಿ. ತುರ್ತು ಘಟನೆಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ದೇಶಭಕ್ತ ಸಂಸ್ಥೆ ಆರ್‌ಎಸ್‌ಎಸ್, ಎಲ್ಲ ತ್ಯಾಗಕ್ಕೂ ಅವರು ಸಿದ್ದವಾಗಿರುತ್ತಾರೆ. ಎಲ್ಲೋ ಒಂದು ಕಡೆ ಸ್ವಾರ್ಥಕ್ಕೆ, ರಾಜಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.
ವಿ.ಸೋಮಣ್ಣ ಪಕ್ಷದ ಹಿರಿಯ ನಾಯಕರು, ಅವರು ಪಕ್ಷ ಬಿಡಲ್ಲ. ಈಗಾಗಲೇ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ , ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಲ್ಲರೂ ಮಾತನಾಡಿದ್ದಾರೆ. ಅವರು ಪಕ್ಷ ಬಿಡಲ್ಲ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ಬಂದ ಅವರು ಬಿಜೆಪಿಯಿಂದ ಎರಡು ಬಾರಿ ಮಂತ್ರಿ ಆಗಿದ್ದರು: ಸೋಮಣ್ಣಗೆ ರೇಣುಕಾಚಾರ್ಯ ಟಾಂಗ್