ಬೆಂಗಳೂರು : ವಜ್ರ ಹವಾನಿಯಂತ್ರಿತ ಸಾರಿಗೆ ಬಸ್ಗಳ ಪ್ರಯಾಣ ದರ, ದಿನದ ಪಾಸ್ ಮತ್ತು ಮಾಸಿಕ ಪಾಸ್ ದರಗಳನ್ನು ಕಡಿಮೆಗೊಳಿಸಿ ಪರಿಷ್ಕೃತ ದರ ಜಾರಿ ಮಾಡಿದೆ. ಇತ್ತೀಚೆಗೆ ಕೋವಿಡ್ ಲಾಕ್ ಡೌನ್, ಸಾರಿಗೆ ಮುಷ್ಕರದಿಂದ ಎಸಿ ಬಸ್ಗಳು ಡಿಪೋದಲ್ಲೇ ನಿಲುವಂತಾಗಿತ್ತು. ಇದೀಗ ನಿಂತಲ್ಲೇ ನಿಲ್ಲುವುದಕ್ಕಿಂತ ಅದನ್ನು ರಸ್ತೆಗಿಳಿಸಿ ನೋ ಲಾಸ್ ನೋ ಪ್ರಾಫಿಟ್ ಚಿಂತನೆಗೆ ಬಿಎಂಟಿಸಿ ನಿಗಮ ಜಾರಿದೆ.
ಈ ಮೂಲಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಿ, ಸಾರ್ವಜನಿಕ ಸಮೂಹ ಸಾರಿಗೆಗಳನ್ನು ಉತ್ತೇಜಿಸಲು ಮತ್ತು ವಜ್ರ ಸಾರಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಜ್ರ ಹವಾನಿಯಂತ್ರಿತ ಸಾರಿಗೆಗಳ ಪ್ರಯಾಣ ದರ ಹಾಗೂ ದೈನಿಕ ಪಾಸಿನ ದರಗಳನ್ನು ಡಿಸೆಂಬರ್ 17 ರಿಂದ ಜಾರಿಗೆ ಬರುವಂತೆ ಕಡಿಮೆಗೊಳಿಸಿ ಪರಿಷ್ಕರಿಸಲಾಗಿದೆ.
ವಜ್ರ ಸಾರಿಗೆ ಸೇವೆಗಳ ಪ್ರಯಾಣ ದರ ಹೀಗಿದೆ : ವಜ್ರ ಸಾರಿಗೆಗಳ ಪ್ರಯಾಣದರಗಳನ್ನು ಶೇಕಡ ಶೇ 34ರಷ್ಟು ಕಡಿತಗೊಳಿಸಲಾಗಿದೆ.
ವಜ್ರ ಬಸ್ ದಿನದ ಪಾಸು: ಪ್ರಸ್ತುತ ದರ (ಜಿಎಸ್ಟಿ ಸೇರಿ) 120 ಇದ್ದು ಪರಿಷ್ಕೃತ ದರ 100 ರೂ ನಿಗದಿ ಮಾಡಲಾಗಿದೆ. ಹಾಗೇ ಮಾಸಿಕ ಪಾಸ್ ದರ 2,000 ರೂ.ದಿಂದ 1,500ಕ್ಕೆ ಕಡಿತ ಮಾಡಲಾಗಿದೆ. ಆದರೆ, ಈ ದರ 2022 ರ ಜನವರಿ ಒಂದರಿಂದ ಜಾರಿಯಾಗಲಿದೆ.
ಹೊಸ ವಜ್ರ ಸಾರಿಗೆ ಸೇವೆಗಳು :
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯಿಂದ ಪ್ರಸ್ತುತ 09 ಮಾರ್ಗಗಳಲ್ಲಿ 83 ಹವಾನಿಯಂತ್ರಿತ ವಜ್ರ ಸೇವೆಗಳನ್ನು ಕಾರ್ಯಾಚರಿಸಲಾಗುತ್ತಿದೆ. ಇನ್ನೂ ಉತ್ತಮ ಗುಣಮಟ್ಟದ ವ್ಯವಸ್ಥಿತ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿಸೆಂಬರ್ 17 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ಪರಿಚಯಿಸಲಾಗಿದ್ದು, ಒಟ್ಟಾರೆ 21 ಮಾರ್ಗಗಳಲ್ಲಿ 173 ಸಾರಿಗೆಗಳನ್ನು ಕಾರ್ಯಾಚರಣೆ ಆಗಲಿದೆ.
ಇನ್ನು ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ಪ್ರಯಾಣ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ನಿಗಮ ತಿಳಿಸಿದೆ.