ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಉಪಚುನಾವಣಾ ಕಣ ಇಂದು ರಾಜಕೀಯ ಮುಖಂಡರ ಆರೋಪ, ಪ್ರತ್ಯಾರೋಪಗಳಿಂದ ರಂಗೇರಿತ್ತು. ಗೋಪಾಲಯ್ಯ ಕಾರ್ಯರ್ತರಿಗೆ, ಧಮ್ಕಿ ಹಾಕುತ್ತಿದ್ದಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ಗೋಪಾಲಯ್ಯ ಪ್ರತಿಕ್ರಿಯಿಸಿದರು. ನಾನೇಕೆ ಧಮ್ಕಿ ಹಾಕಲಿ, ಧಮ್ಕಿ ಹಾಕಿದ್ದನ್ನು ಪ್ರೂವ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಗುತ್ತಿಗೆದಾರರಿಗೆ ಧಮ್ಕಿ ಹಾಕಿ ಹಣ ಕಬಳಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು, ಇದೆಲ್ಲ ಕುಮಾರಣ್ಣಗೆ ಗೊತ್ತು. ಚುನಾವಣೆಗೋಸ್ಕರ ಈ ರೀತಿ ಮಾತನಾಡ್ತಿದ್ದಾರೆ. ಕ್ಷೇತ್ರದ ಜನರಿಗೆ ಗೊತ್ತು ಅನುದಾನ ಕೊಟ್ಟಿದ್ದಾರಾ? ಕೆಲಸಕಾರ್ಯ ಮಾಡಿದ್ದಾರಾ ಎಂದು. ರಾಜಕಾರಣದಲ್ಲಿ ನಾನು ಇನ್ನು ಚಿಕ್ಕವನು. ಯಾರೇ ತಪ್ಪು ಮಾಡಿದ್ರು ಸಂವಿಧಾನದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಪಕ್ಷದಿಂದ ಹೊರಗೆ ಬಂದಿದ್ದೇನೆ ಮಾತನಾಡುವುದಿಲ್ಲ ಎಂದರು.
ಕುಟುಂಬದ ಕೊಲೆ ಪ್ರಕರಣಕ್ಕೆ ನಾನು ಬೆಂಬಲ ಕೊಟ್ಟಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾರದ್ದೇ ಕುಟುಂಬದಲ್ಲಿ ತಪ್ಪಾಗಿದ್ದರೆ ಕಾನೂನಿದೆ, ಸಂವಿಧಾನ ಇದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಅವರು ದೊಡ್ಡವರು, ಏನೋ ಹೇಳಿದ್ದಾರೆ. ನನಗೆ ಯಾವ ರೀತಿ ಉತ್ತರ ಕೊಡಬೇಕು ಎಂದು ಗೊತ್ತಿಲ್ಲ ಎಂದರು.
ಇನ್ನು ದೇವೇಗೌಡರ ಬಳಿ ಗಂಡ ಹೆಂಡತಿ ಕಾಲಿಗೆ ಬಿದ್ದು ಟಿಕೆಟ್ ಪಡೆದರು ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದ್ದಷ್ಟು ದಿನ ಪಕ್ಷಕ್ಕೆ ನಿಷ್ಠೆಯಿಂದ ಇದ್ದೆ. ಪಕ್ಷವನ್ನು ಸಂಘಟನೆ ಮಾಡಿದ್ದೇನೆ ಎಂದರು.
ಗೋಪಾಲಯ್ಯಗೆ ಮತ ಹಾಕಿದ್ರೆ ಒಕ್ಕಲಿಗ ಸಮುದಾಯದ ವಿರುದ್ಧ ಮತ ಹಾಕಿದಂತೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಕ್ಷೇತ್ರದಲ್ಲಿರೋ ನನ್ನ ಸಮುದಾಯ ಹಾಗೂ ಬೇರೆ ಸಮುದಾಯ ಗೋಪಾಲಯ್ಯ ಅಲ್ಲದೇ ಮತ್ಯಾರಿಗೆ ಬೆಂಬಲಿಸ್ತಾರೆ? ಈ ಕ್ಷೇತ್ರದಲ್ಲಿ ಜನ್ಮ ತಾಳಿದ್ದೇನೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ನನ್ನ ಹುಟ್ಟು ಇಲ್ಲೇ, ಸಾವು ಇದೇ ಕ್ಷೇತ್ರದಲ್ಲೇ. 6 ವರ್ಷದಲ್ಲಿ ಏನು ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಕ್ಷೇತ್ರದ ಜನ ಏನೇ ಶಿಕ್ಷೆ ಕೊಟ್ರು ಸ್ವೀಕಾರ ಮಾಡ್ತೀನಿ ಎಂದರು.