ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶಾಸಕರ ತಂಟೆ, ತಕರಾರುಗಳು ಸಾಮಾನ್ಯ ಎನ್ನುವಂತಾಗಿದೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯಸಭಾ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಶಾಸಕರ ಪ್ರತ್ಯೇಕ ಸಭೆ ಬೆನ್ನಲ್ಲೇ ಇದೀಗ ಬಿಜೆಪಿಯ ಕೆಲ ಶಾಸಕರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ದೂರು ಕೊಂಡೊಯ್ದಿದ್ದಾರೆ.
ಗುರುವಾರ ಸಂಜೆ 7 ಗಂಟೆಗೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡಿದ ವಿಜಯಪುರ, ಧಾರವಾಡ, ಬೆಳಗಾವಿ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ. ಶಿವಮೊಗ್ಗಕ್ಕೆ ಅನುದಾನ ಸಿಗುತ್ತದೆ. ಆದರೆ, ನಮ್ಮ ಕ್ಷೇತ್ರಗಳಿಗೆ ಸಿಗುತ್ತಿಲ್ಲ. ನಾವು ಕ್ಷೇತ್ರದಲ್ಲಿ ಉತ್ತರಿಸಲು ಆಗುತ್ತಿಲ್ಲ. ನಮ್ಮ ಈ ಸಮಸ್ಯೆ ಕೂಡಾ ಪರಿಹರಿಸಿಕೊಡಿ ಎಂದು ಕಟೀಲ್ಗೆ ಮನವಿ ಸಲ್ಲಿಸಿದ್ದಾರೆ.
ವಿಭಾಗವಾರು ಸಭೆ ಕರೆಯಬೇಕು. ಶಾಸಕಾಂಗ ಪಕ್ಷದ ಸಭೆ ನಡೆಸಬೇಕು ಎಂದು ಕಟೀಲ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಸುಮಾರು 1 ಗಂಟೆಗಳ ಕಾಲ ಕಟೀಲ್ ಜೊತೆ ಮಾತುಕತೆ ನಡೆಸಿದ್ದು, ಅಂತಿಮವಾಗಿ ಸಿಎಂ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಕಟೀಲ್ ಭರವಸೆ ನೀಡಿದ್ದಾರೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಅಭಯ್ ಪಾಟೀಲ್, ಅನಿಲ್ ಬೆನಕೆ, ಜ್ಯೋತಿ ಗಣೇಶ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಅಮೃತ್ ದೇಸಾಯಿ ಸೇರಿದಂತೆ 10 ಶಾಸಕರು ಚರ್ಚೆಯಲ್ಲಿ ಭಾಗಿಯಾಗಿದ್ದರು.
ಇಷ್ಟೆಲ್ಲ ನಡೆದಿರುವುದರ ಕೇಂದ್ರ ಬಿಂದು ಕೂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ರಾಜ್ಯಸಭಾ ಚುನಾವಣೆ ವೇಳೆ ಉಮೇಶ್ ಕತ್ತಿ ನಿವಾಸದಲ್ಲಿ ಭೋಜನ ಕೂಟದೊಂದಿಗೆ ಸಭೆ ನಡೆಸಿ ಶಾಸಕರ ತಂಡ ಕಟ್ಟಿಕೊಂಡು ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ವಿರುದ್ಧ ಸಿಡಿದೆದ್ದಿದ್ದರು ಯತ್ನಾಳ್. ಇದೀಗ ಶಾಸಕರಾದ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಬಿಟ್ಟು ಹೊಸ ತಂಡವನ್ನು ಕಟ್ಟಿರುವಂತಿದೆ.
ನಿರಾಣಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ, ಉಮೇಶ್ ಕತ್ತಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದರಿಂದ ಉಭಯ ನಾಯಕರು ಸದ್ಯಕ್ಕೆ ಬಂಡಾಯದ ಬಾವುಟ ಕೆಳಗಿಳಿಸಿದ್ದಾರೆ. ಹೀಗಾಗಿ ಯತ್ನಾಳ್ ಈ ಇಬ್ಬರು ನಾಯಕರ ಬಿಟ್ಟು ಮತ್ತೊಂದು ತಂಡ ಕಟ್ಟಿಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಡಿದೇಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯದ ಮಟ್ಟಿಗೆ ಇದು ಅನುದಾನ, ಕ್ಷೇತ್ರದ ಕೆಲಸ ಕಾರ್ಯಗಳಿಗೆ ಸೀಮಿತ ಬೇಡಿಕೆಯಾಗಿರುವ ಕಾರಣ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಕ್ಷೀಣವಾಗಿದೆ. ಆದರೂ ಬಂಡಾಯದಂತಹ ಚಟುವಟಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡುವ ಮುನ್ನ ಶಾಸಕರೊಬ್ಬರ ಮನೆಯಲ್ಲಿ ಸಭೆ ಸೇರಿ ಚರ್ಚಿಸಿದ ನಂತರವೇ ಬಿಜೆಪಿ ಕಚೇರಿಗೆ ತೆರಳಿದ್ದಾರೆ. ಈ ಹಿಂದೆ ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ಸೇರುತ್ತಿದ್ದರು. ಆದರೆ, ಈಗ ಯಾರ ನಿವಾಸದಲ್ಲಿ ಸಭೆ ಸೇರಿದ್ದರು ಎನ್ನುವುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಶಾಸಕರು ಮತ್ತೊಂದು ಸುತ್ತಿನ ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆ ಕಟೀಲ್ ಇದೀಗ ಸಿಎಂ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಆದರೂ ಮುಂದೆ ಯತ್ನಾಳ್ ನೇತೃತ್ವದ ರೆಬೆಲ್ ಚಟುವಟಿಕೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.