ಬೆಂಗಳೂರು: ಕಟ್ಟಡದಿಂದ ಬಿದ್ದು ಉದ್ಯಮಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರದ ನಾಗರಭಾವಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಮಾರಾಂಜಿನಪ್ಪ (62) ಎಂಬಾತನೆ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಾರಾಂಜಿನಪ್ಪ ನಾಗರಭಾವಿಯಲ್ಲಿನ ತನ್ನ ಎರಡನೇ ಪತ್ನಿ ಮನೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಕಟ್ಟಡದಿಂದ ಬಿದ್ದ ಉದ್ಯಮಿಯನ್ನು ಎರಡನೇ ಪತ್ನಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ಬಗ್ಗೆ ಮಾರಾಂಜಿನಪ್ಪ ಕುಟುಂಬಸ್ಥರು ಆತನ ಎರಡನೇ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಾಂಜಿನಪ್ಪ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಮೊದಲ ಹೆಂಡತಿಯು ಬಾಗಲಕುಂಟೆಯಲ್ಲಿ ವಾಸವಾಗಿದ್ದಾರೆ. ಎರಡನೇ ಪತ್ನಿ ಅನ್ನಪೂರ್ಣೇಶ್ವರಿನಗರದಲ್ಲಿ ಇದ್ದರು. ನಿನ್ನೆ ರಾತ್ರಿ ಎರಡನೇ ಪತ್ನಿಯ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಮಾರಾಂಜಿನಪ್ಪ ಪಾನಮತ್ತನಾಗಿದ್ದು, ಬೆಳಗ್ಗೆ 3 ಗಂಟೆ ವೇಳೆಗೆ ಮಹಡಿಯಿಂದ ಬಿದ್ದಿದ್ದಾರೆ ಎನ್ನಲಾಗಿದೆ.
ಎರಡನೇ ಪತ್ನಿಯೇ ಕೊಲೆ ಮಾಡಿರುವುದಾಗಿ ಮೊದಲ ಪತ್ನಿಯು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕಸ್ಮಿಕವಾಗಿ ಬಿದ್ದಿರುವ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಕುರಿತಂತೆ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ.. ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಗನ್ಮ್ಯಾನ್ನಿಂದ ಫೈರಿಂಗ್- ಎಫ್ಐಆರ್ ದಾಖಲು: ಗನ್ಮ್ಯಾನ್ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಬಳಿಯಿದ್ದ ಪಿಸ್ತೂಲ್ನಿಂದ ಫೈರ್ ಮಾಡಿರುವ ಬಗ್ಗೆ ಮತ್ತೊರ್ವ ಗನ್ಮ್ಯಾನ್ ದೂರು ನೀಡಿದ್ದು, ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಗನ್ಮ್ಯಾನ್ ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೂಲತಃ ಕೇರಳದ ಅನಿಲ್ ಕುಮಾರ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಕೆಲ ವರ್ಷ ಕೇರಳದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿಕೊಂಡು ಅನಂತರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಪ್ರಶಾಂತ್ ಕೂಡ ಹಲವರಿಗೆ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದಾನೆ. ಸದ್ಯ ಇಬ್ಬರಿಗೂ ಅವರ ಮಾಲೀಕರು ಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು ಎಂದು ತಿಳಿದುಬಂದಿದೆ.
ಇದೇ ತಿಂಗಳ 26ರಂದು ಸಂಜೆ ಕೆಲಸ ಮುಗಿಸಿ ಇಬ್ಬರೂ ಗನ್ಮ್ಯಾನ್ಗಳು ಪಿಜಿಗೆ ಬಂದಿದ್ದರು. ಸ್ನೇಹಿತ ಅಮಿತ್ ಎಂಬಾತನ ಜೊತೆಗೂಡಿ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದರು. ಇದೇ ವೇಳೆ ಪ್ರಶಾಂತ್ಗೆ ಹೆಂಡತಿಯಿಂದ ಕರೆ ಬಂದಿದೆ. ಮಾತನಾಡುತ್ತ ಜೋರಾಗಿ ಕಿರುಚಾಡಿದ್ದಾನೆ. ಯಾಕೆ ಜೋರಾಗಿ ಮಾತನಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಅನಿಲ್ ಕುಮಾರ್ನೊಂದಿಗೆ ಪ್ರಶಾಂತ್ ಒರಟಾಗಿ ವರ್ತಿಸಿದ್ದಾನೆ. ಅಲ್ಲದೇ, ಸಿಟ್ಟಿನಲ್ಲಿ ತನ್ನ ಬಳಿಯಿದ್ದ ಪರವಾನಗಿ ಪಡೆದುಕೊಂಡಿದ್ದ ಪಿಸ್ತೂಲ್ ತೆಗೆದು ಕಾಕ್ ತಿರುಗಿಸಿ ಮನೆಯ ಕಿಟಕಿ ಕಡೆ ಬ್ಯಾರಲ್ ತಿರುಗಿಸಿ ಫೈರಿಂಗ್ ಮಾಡಿದ್ದಾನೆ. ಅದೃಷ್ಟವಶಾತ್ ಯಾರಿಗೂ ಗುಂಡು ತಗುಲಿಲ್ಲ. ಬಳಿಕ ಪ್ರಶಾಂತ್ನಿಂದ ಪಿಸ್ತೂಲ್ ತೆಗೆದಿರಿಸಿಕೊಂಡಿದ್ದ ಅನಿಲ್ ಜೊತೆ ಮತ್ತೆ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.