ಬೆಂಗಳೂರು: ಬಿಬಿಎಂಪಿಯ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲು ಪಾಲಿಕೆಯ ಆರೋಗ್ಯ, ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.
ಜುಲೈ 15ರಿಂದ 22ರವರೆಗೆ ಇರುವ ಲಾಕ್ಡೌನ್ ಸಮಯದಲ್ಲಿ ಕೋವಿಡ್-19 ಪ್ರಕರಣಗಳನ್ನು ಮನೆಬಾಗಿಲಿಗೆ ಹೋಗಿ ಸಮೀಕ್ಷೆ ನಡೆಸಲು ಸರ್ಕಾರ ಸೂಚಿಸಿದೆ. ಹೀಗಾಗಿ ವೈದ್ಯಾಧಿಕಾರಿಗಳು ಕಂಟೈನ್ಮೆಂಟ್ ವಲಯಗಳ ಮನೆಗಳಿಗೆ ಹೋಗಿ ಕೋವಿಡ್ ಲಕ್ಷಣಗಳಿರುವ ಸಾರ್ವಜನಿಕರಿಗೆ ರ‍್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಿ ತಕ್ಷಣ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ.
ಸಮೀಕ್ಷೆಗೆ ಒಂದು ವಾಹನದಲ್ಲಿ 1 ಲ್ಯಾಬ್ ಟೆಕ್ನಿಷಿಯನ್, ಒಬ್ಬರು ಸಹಾಯಕ ಸಿಬ್ಬಂದಿಯು ಮಾಹಿತಿ ಭರ್ತಿ ಮಾಡಬೇಕು. ಪಾಸಿಟಿವ್ ಟೆಸ್ಟ್ ಸ್ಲೈಡ್ನ್ನು ಸಂಬಂಧಪಟ್ಟ ನಗರ ಪ್ರಾಥಮಿಕ ವೈದ್ಯಾಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ಕಳಿಸುವುದು ಹಾಗೂ ಅವರು ಐಸಿಎಂಆರ್ ಪೋರ್ಟಲ್ನಲ್ಲಿ ನಮೂದಿಸುವಂತೆ, ಮೊದಲ ಹಂತದಲ್ಲಿ ಐದು ತಂಡ ರಚಿಸುವಂತೆ ಆಯುಕ್ತರು ಆದೇಶಿಸಿದ್ದಾರೆ.
ಇದರೊಂದಿಗೆ ಉಸಿರಾಟದ ತೊಂದರೆ ಹಾಗೂ ಶೀತ ಸಂಬಂಧಿ ರೋಗಿಗಳ ತಪಾಸಣೆಗೆ, 198 ವಾರ್ಡ್ಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಚಿಕಿತ್ಸಾಲಯ ಸ್ಥಾಪಿಸಿ, ಗಂಟಲು ದ್ರವ ಪರೀಕ್ಷೆ ಮಾಡಬೇಕು. ಎಸಿಮ್ಟಮ್ಯಾಟಿಕ್ ಹಾಗೂ ಸಿಮ್ಟಮ್ಯಾಟಿಕ್ ಪ್ರಕರಣಗಳ ಪ್ರತ್ಯೇಕವಾಗಿ ಗಂಟಲಿನ ದ್ರವ ಪರೀಕ್ಷೆ ಮಾಡಿ ಸಂಗ್ರಹ ಮಾಡಲು ಸೂಚಿಸಲಾಗಿದೆ.
ಜೊತೆಗೆ ಕಂಟೈನ್ಮೆಂಟ್ ಪ್ರದೇಶಗಳಲ್ಲಿರುವ ಬೇರೆ ಕಾಯಿಲೆಗಳಿರುವವರನ್ನು ಪಟ್ಟಿ ಮಾಡಿ, ಬೆಳಗ್ಗೆ 10ರಿಂದ ಸಂಜೆಯವರೆಗೆ ಆಂಟಿಜನ್ ಕಿಟ್ ಮೂಲಕ ಪರೀಕ್ಷೆ ನಡೆಸಬೇಕೆಂದು ಆರೋಗ್ಯ, ವಿಶೇಷ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.