ಬೆಂಗಳೂರು: ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀ ವಿರುದ್ಧದ ಅತ್ಯಾಚಾರ ಆರೋಪವನ್ನು ಕೈಬಿಟ್ಟಿರುವ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗಳ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎನ್. ಕೆ ಸುಧೀಂದ್ರರಾವ್ ಹಿಂದೆ ಸರಿದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರಿದ ವಾದವನ್ನು ಆಲಿಸಲು ಸಮಯಾವಕಾಶ ತುಂಬಾ ಕಡಿಮೆ ಇರುವ ಹಿನ್ನೆಲೆ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾ. ಎನ್. ಕೆ ಸುಧೀಂದ್ರರಾವ್ ತಿಳಿಸಿದ್ದಾರೆ.
ರಾಘವೇಶ್ವರ ಶ್ರೀಗಳನ್ನು ಆರೋಪ ಮುಕ್ತಗೊಳಿಸಿ 2016ರ ಮಾರ್ಚ್ 31ರಂದು ನಗರದ ಸೆಷನ್ಸ್ ಕೋರ್ಟ್ ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾ. ಎನ್. ಕೆ ಸುಧೀಂದ್ರರಾವ್ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿತ್ತು. ಆದರೆ, ನ್ಯಾಯಮೂರ್ತಿಗಳು ಮುಂದಿನ ತಿಂಗಳು ಡಿ. 3ಕ್ಕೆ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆ ಕಾಲಾವಕಾಶ ಕೊರತೆಯಾಗುವುದರಿಂದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಈವರೆಗೆ 16 ನ್ಯಾಯಮೂರ್ತಿಗಳು ವಿವಿಧ ಕಾರಣಗಳಿಗಾಗಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದೀಗ ಅತ್ಯಾಚಾರ ಆರೋಪ ಪ್ರಕರಣದ ಮೇಲ್ಮನವಿ ವಾದವನ್ನು ಅರ್ಧ ಆಲಿಸಿದ್ದ ನ್ಯಾ. ಸುಧೀಂದ್ರ ರಾವ್ ಕಾಲಾವಕಾಶದ ಕೊರತೆಯಿಂದ ಪ್ರಕರಣದ ವಿಚಾರಣೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಕರಣವನ್ನು ಪುನಃ ಮತ್ತೊಂದು ಪೀಠ ಪ್ರಾಥಮಿಕ ಹಂತದಿಂದ ವಿಚಾರಣೆ ನಡೆಸಬೇಕಿದೆ.
ಪ್ರಕರಣದ ಹಿನ್ನೆಲೆ:
ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ, ಶ್ರೀಗಳು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಸೂಕ್ತ ಸಾಕ್ಷಾಧಾರಗಳಿದ್ದು, ತನಿಖಾಧಿಕಾರಿಗಳು ಶ್ರೀಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೂ, ಸೆಷನ್ಸ್ ಕೋರ್ಟ್ ಅತ್ಯಾಚಾರ ನಡೆಸಿದ ಬಗ್ಗೆ ಸಾಕ್ಷಾಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟು ಶ್ರೀಗಳನ್ನು ಆರೋಪ ಮುಕ್ತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಹಾಗೂ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.
ಓದಿ: ಬೈಯಪಾ ಅಧ್ಯಕ್ಷರಾಗಿ ಸಚಿವ ಅಶೋಕ್ ಸಂಬಂಧಿ ನೇಮಕ ಪ್ರಶ್ನಿಸಿದ ಅರ್ಜಿ ವಜಾ