ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ರಚನೆಯಾದ ದಿನದಂದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆದಿದೆ.
ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಹಾಗೂ ಆಕೆಯ ಸ್ನೇಹಿತೆ ಸೇರಿ ಐವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಜಯಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ವಿಶೇಷ ತನಿಖಾ ತಂಡದ ಬೇಟೆ ಈಗ ಸಿಡಿ ಬಿಡುಗಡೆಯಿಂದಲೇ ಶುರುವಾಗಿದ್ದು, ಸಿಡಿ ತಯಾರಕರವರೆಗೂ ಸಾಗುವ ಲಕ್ಷಣ ಕಾಣಿಸುತ್ತಿದೆ.
ಸಿಡಿಯಲ್ಲಿ ಯಾರಿಗೇನು ಕೆಲಸ?
ವಿಜಯನಗರ ನಿವಾಸಿಯಾಗಿದ್ದ ಯುವಕ ರಾಸಲೀಲೆಯ ಸಿಡಿಯನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಕೊಟ್ಟಿದ್ದ ಎನ್ನಲಾಗಿದೆ. ಈ ಯುವಕನ ಗೆಳತಿ ಸರ್ಕಾರಿ ನೌಕರಿಯಲ್ಲಿದ್ದು, ಈತನ ಜೊತೆಗೆ ಸತತ ಸಂಪರ್ಕದಲ್ಲಿದ್ದಳು. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವಕ ಸಿಡಿ ತಯಾರಿ ಮತ್ತು ಬಿಡುಗಡೆಯಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. ಸಿಡಿಯಲ್ಲಿದ್ದ ಯುವತಿಯ ಬಾಯ್‌ಫ್ರೆಂಡ್‌ಗೆ ರಾಸಲೀಲೆ ಸಿಡಿ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು. ಇವನ ಜೊತೆಗೆ ಇನ್ನೊಬ್ಬ ಯುವಕನನ್ನೂ ವಶಕ್ಕೆ ಪಡೆದಿದ್ದು, ಆತನಿಗೂ ಸಿಡಿ ಬಗ್ಗೆ ವಿವರ ಗೊತ್ತಿತ್ತು ಎಂಬ ಮಾಹಿತಿ ಇದೆ.
ಜತೆಗೆ ಇನ್ನೊಬ್ಬ ಯುವಕನನ್ನೂ ವಶಕ್ಕೆ ಪಡೆದಿದ್ದು, ಆತನಿಗೂ ಸಿಡಿ ಬಗ್ಗೆ ವಿವರ ಗೊತ್ತಿತ್ತು ಎನ್ನುವುದು ಪೊಲೀಸ್ ಮೂಲಗಳಿಂದ ಸಿಗುತ್ತಿರುವ ಸದ್ಯದ ಮಾಹಿತಿ.
ಇದರ ನಡುವೆ ಸಿಡಿ ಬಿಡುಗಡೆ ಮತ್ತು ತಯಾರಿಯಲ್ಲಿ ತೊಡಗಿಕೊಂಡಿದ್ದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರು ಸಿಡಿಯ ಕಿಂಗ್‌ಪಿನ್‌ಗಳು ಎನ್ನಲಾಗಿದೆ. ಮೂರು ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಇವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇವರು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದ್ದು, ಇವರ ಪತ್ತೆಗಾಗಿ ಎಸ್ಐಟಿ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ಸ್ವತಂತ್ರ ಭಾರತದ ಅಮೃತ ಘಳಿಗೆ: ಆಗಸದಲ್ಲಿ ಜೆಟ್ ಫೈಟರ್ಗಳ 75ರ ಅಂಕಿಯಾಟದ ಸೊಬಗು
ರಷ್ಯಾದ ಸರ್ವರ್ ಮೂಲಕ ಹ್ಯಾಕ್ ಮಾಡಿ ರಾಸಲೀಲೆ ವಿಡಿಯೋವನ್ನು ವರ್ಚುಯಲ್ ಪ್ರೈವೇಟ್ ನೆಟ್ವರ್ಕ್ ಮೂಲಕ (ವಿಪಿಎನ್) ಅಪ್‌ಲೋಡ್ ಮಾಡಲಾಗಿದೆ ಎಂಬಂತೆ ಬಿಂಬಿಸಲು ಐಪಿ ಅಡ್ರೆಸ್ ಬದಲಿಸಿದ್ದ. ಸಿಡಿ ತಯಾರಿಕೆ ಮತ್ತು ಬಿಡುಗಡೆಯಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಖಾಸಗಿ ಸಂಸ್ಥೆಯೊಂದರಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಸಿಡಿ ತಯಾರಿಸಿದ್ದ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈತನ ಜೊತೆಗೆ ತಲೆಮರೆಸಿಕೊಂಡಿರುವ ಇನ್ನೋರ್ವ ವ್ಯಕ್ತಿ ರಾಸಲೀಲೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ.
ಸಿಡಿ ಬರ್ನಿಂಗ್ ಮಾಡಿ ಡೇಟ್- ಟೈಮ್ ಚೇಂಜ್ ಮಾಡಿದ್ರು..?
ವಿಡಿಯೋ ಚಿತ್ರೀಕರಿಸಿಕೊಂಡು ಸಿಡಿಯಾಗಿ ಪರಿವರ್ತಿಸುವ ವೇಳೆ ಕಂಪ್ಯೂಟರ್‌ನಲ್ಲಿ ದಿನಾಂಕ ಹಾಗೂ ಸಮಯ ಬದಲಾಯಿಸಿದ್ದಾರೆ. 2017 ಡಿಸೆಂಬರ್ ಎಂದು ಬದಲಾಯಿಸಿ ಸಿಡಿ ಬರ್ನ್ ಮಾಡುವ ಮೂಲಕ ಸಿಡಿಯ ಮಾಹಿತಿ ಪೊಲೀಸರಿಗೆ ತಿಳಿಯಬಾರದು ಎಂದು ಈ ಪ್ಲಾನ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ವಿಚಾರಣೆಯಷ್ಟೇ, ಬಂಧಿಸಲು ಅವಕಾಶವಿಲ್ಲ..
ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ಐವರನ್ನು ಕೇವಲ ವಿಚಾರಣೆ ಮಾಡಲು ಮಾತ್ರ ಎಸ್ಐಟಿಗೆ ಅವಕಾಶವಿದೆಯೇ ಹೊರತು, ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಏಕೆಂದರೆ ಬಂಧಿಸುವ ಮುನ್ನ ಎಫ್ಐಆರ್ ದಾಖಲಾಗಬೇಕು. ಪ್ರಕರಣ ದಾಖಲಾಗದಿದ್ದರೆ ಅರೆಸ್ಟ್ ಮಾಡಲು ಸಾಧ್ಯವಿಲ್ಲ. ವಿಚಾರಣೆ ವೇಳೆ ಅಧಿಕೃತವಾಗಿ ಮೊಬೈಲ್ ಜಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿಚಾರಣೆಗೊಳಗಾದ ವ್ಯಕ್ತಿಗಳ ಮನೆ ಮೇಲೆ ರೇಡ್ ಅಥವಾ ಆತನ ಬಳಿಯಿರುವ ಯಾವುದೇ ವಸ್ತುಗಳನ್ನು ಮುಟ್ಟುಗೋಲು ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ದೂರು ನೀಡಬೇಕು ಆಥವಾ ಪೊಲೀಸರೇ ಸುಮೊಟೊ ಕೇಸ್ ಅಡಿ ಪ್ರಕರಣ ದಾಖಲಿಸಿದಾಗ ಮಾತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.