ಬೆಂಗಳೂರು: ಖಾಸಗಿ ಬ್ಯಾಂಕ್ಗಳಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗಿದ್ದರೂ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ವಿಧಾನಪರಿಷತ್ನಲ್ಲಿ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಎಚ್.ಎಂ ರಮೇಶ್ ಗೌಡ ವಿಧಾನಪರಿಷತ್ನಲ್ಲಿ ನಿಯಮ 330ರಡಿ ಗಮನಸೆಳೆದ ವಿಚಾರದ ಮೇಲೆ ಬಿಎಸ್ವೈ ಪರವಾಗಿ ಉತ್ತರ ನೀಡಿದ ಅವರು, ಹೆಚ್ಡಿಎಫ್ಸಿ ಸೇರಿದಂತೆ ಹಲವು ಖಾಸಗಿ ಬ್ಯಾಂಕ್ನಿಂದ ಸಮಸ್ಯೆಗೊಳಗಾಗಿರುವ ಗ್ರಾಹಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ರಾಜ್ಯಮಟ್ಟದ ನಾಯಕರನ್ನು ಕಳುಹಿಸಿಕೊಡುತ್ತೇವೆ. ಸಮಸ್ಯೆ ಪರಿಹಾರಕ್ಕೆ ಅತ್ಯಂತ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸದನದ ಗಮನ ಸೆಳೆದ ರಮೇಶ್ ಗೌಡ, ರಾಜ್ಯದಲ್ಲಿ ಅನೇಕ ಖಾಸಗಿ ಬ್ಯಾಂಕ್ಗಳು ಸಾರ್ವಜನಿಕರಿಗೆ ಅತಿಯಾದ ಆಮಿಷವೊಡ್ಡಿ, ಯಾವುದೇ ತೊಂದರೆ ನೀಡಲ್ಲ ಎಂಬ ಭರವಸೆ ನೀಡಿ , ಎಲ್ಲೆಂದರಲ್ಲಿ ಸಹಿ ಪಡೆದು ಸಾಲ ನೀಡುತ್ತಿದ್ದು, ತದನಂತರ ಗ್ರಾಹಕರ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕೊಡಗು ಜಿಲ್ಲಾ ಮಾಜಿ ಸೈನಿಕರು ಹಾಗೂ ಅವಲಂಬಿತರ ನಿವೇಶನ ಸಮಸ್ಯೆ ಬಗೆಹರಿಸಲು ಕ್ರಮ: ಕೋಟಾ
ಪದೇಪದೇ ನಾಗರಿಕರಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನೊಂದ ನಾಗರಿಕರು ಆತ್ಮಹತ್ಯೆಗೆ ಶರಣಾಗಿರುವ ನಿದರ್ಶನವಿದೆ. ಇನ್ನೊಂದೆಡೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಬ್ಯಾಂಕಿಗೆ ಭೇಟಿಕೊಟ್ಟ ಸಂದರ್ಭಗಳಲ್ಲಿ ಅಲ್ಲಿನ ಸಿಬ್ಬಂದಿ ವರ್ಗದವರು ಮತ್ತೊಂದು ತಿಂಗಳ ಬಡ್ಡಿಯ ಆಸೆಗಾಗಿ ಮುಂದಿನ ತಿಂಗಳು ಬಂದು ಸಾಲ ಮರುಪಾವತಿ ಮಾಡಿ ಎಂದು ಸಬೂಬು ಹೇಳುತ್ತಾ ಮುಂದೂಡುತ್ತಾರೆ. ಒಂದೊಮ್ಮೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದರು ಅದನ್ನು ಒಂದು ತಿಂಗಳ ನಂತರ ಆವಧಿ ಪಡೆದು ಅದರ ಮೇಲೆ ಬಡ್ಡಿ ವಿಧಿಸುತ್ತಾ ನಾಗರಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಈ ವಿಚಾರವನ್ನು ಫೆಬ್ರುವರಿ 19 ರಂದು ರಾಜ್ಯ ಮಟ್ಟದ ಬ್ಯಾಂಕ್ಗಳ ಸಮಿತಿಯವರ ಗಮನಕ್ಕೆ ತರಲಾಗಿದೆ. ಈ ವಿಷಯಗಳ ಬಗ್ಗೆ ಮಾರ್ಚ್ 19ರಂದು ಪತ್ರ ಬರೆದು ನಾಗರಿಕರಿಗೆ ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಬಾರದೆಂದು ತಿಳಿಸಿರುತ್ತಾರೆ. ಸಾಲ ಮರುಪಾವತಿ ಮಾಡುವ ಆಯ್ಕೆ ನಾಗರಿಕರದ್ದಾಗಿದ್ದು, ಸಾಲ ಮರುಪಾವತಿಯನ್ನು ನಿರಾಕರಿಸುವುದು ಸ್ವೀಕಾರಾರ್ಹವಲ್ಲ ಎಂದು ತಮ್ಮ ಪತ್ರದಲ್ಲಿ ಸಂಚಾಲಕರು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿ ಹೆಚ್ಡಿಎಫ್ಸಿ ಮತ್ತು ಇನ್ನಿತರ ಖಾಸಗಿ ಬ್ಯಾಂಕುಗಳ ರಾಜ್ಯ ಮಟ್ಟದ ಸಮನ್ವಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಮಹಾ ಪ್ರಬಂಧಕರು ಈ ವಿಷಯವನ್ನು ಮುಂದಿನ ಕ್ರಮಕ್ಕಾಗಿ ತಮ್ಮ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.